

ಬೀದರ್: ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ತೊಗರಿ ಖರೀದಿ ಮಾಡುತ್ತಿದ್ದು, ಪ್ರತಿ ಕ್ವಿಂಟಾಲ್ಗೆ ರೂ. 6 ಸಾವಿರ ನಿಗದಿಪಡಿಸಿದೆ. ಇದರ ಜತೆಯಲ್ಲಿ ರಾಜ್ಯ ಸರ್ಕಾರ ಸಹ ಕ್ವಿಂಟಾಲ್ಗೆ ಕನಿಷ್ಠ 1000 ರೂ. ಸಹಾಯ ಧನ ನೀಡಬೇಕು ಎಂದು ಜಿಲ್ಲಾ ರೈತ ಸಂಘ (ಕೋಡಿಹಳ್ಳಿ ಬಣ) ಆಗ್ರಹಿಸಿದೆ.
ಬುಧವಾರ ನಗರಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿ, ಅತಿವೃಷ್ಟಿಯಿಂದ ಬಹುತೇಕ ಬೆಳೆಗಳು ಹಾನಿಯಾಗಿದೆ. ಅಳಿದುಳಿದ ತೊಗರಿಗೆ ಉತ್ತಮ ಬೆಲೆ ನೀಡಿದರೆ ರೈತರಿಗೆ ಅನುಕೂಲವಾಗಲಿದೆ. ಕನಿಷ್ಠ 1 ಸಾವಿರ ರೂ.ಸಹಾಯ ಧನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಎಸ್ಸೆಸ್ಕೆ ಪುನಶ್ಚೇತನಕ್ಕೆ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ನಾರಂಜಾ ಸಕ್ಕರೆ ಕಾರ್ಖಾನೆಯ ಕಬ್ಬು ತೆರಿಗೆ ಬಾಕಿ ಹಣ ಸರ್ಕಾರದ ಷೇರು ಹಣವಾಗಿ ಪರಿವರ್ತನೆಗೆ 20 ಕೋಟಿ ರೂ. ಬಿಡುಗಡೆ ಮಾಡಬೇಕು. ಕಳೆದ ವರ್ಷದಲ್ಲಿ ಬಿಕೆಎಸ್ಕೆ ಹಾಗೂ ಭವಾನಿ ಶುಗರ್ಸ್ ಕಾರ್ಖಾನೆಗಳು ರೈತರ ಬಾಕಿ ಹಣ ಉಳಿಸಿಕೊಂಡಿದ್ದು, ಬೇಗ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮಂಡಿಸಲಾಗಿದೆ.
ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಪ್ರಮುಖರಾದ ದಯಾನಂದ ಸ್ವಾಮಿ ಸಿರ್ಸಿ, ಶ್ರೀಮಂತ ಬಿರಾದಾರ, ಶಂಕ್ರೆಪ್ಪ ಪಾರಾ, ಭಾವರಾವ್ ಪಾಟೀಲ್, ಸಿದ್ದಣ್ಣಾ ಭೂಶೆಟ್ಟಿ, ಶೇಷರಾವ ಕಣಜಿ, ಬಾಬುರಾವ ಜೋಳದಾಪಕಾ ಇತರರಿದ್ದರು.