

ಬೀದರ್: ಕ್ವಿಂಟಾಲ್ ತೊಗರಿಗೆ 10 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ರೈತ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಪ್ರಮುಖರು, ತೊಗರಿ ವಾರ್ಷಿಕ ವಾಣಿಜ್ಯ ಬೆಳೆ. ಹೆಸರು ಮತ್ತು ಉದ್ದು ಕನಿಷ್ಠ ಬೆಂಬಲ ಬೆಲೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಆದರೆ ತೊಗರಿ ಬೆಲೆ ಮಾತ್ರ ಆಮೆವೇಗದಲ್ಲಿ ಸಾಗಿದೆ. ಕೇಂದ್ರ ಸಕರ್ಾರಕ್ಕೆ ಮೂರು ತಿಂಗಳ ಬೆಳೆಗೂ, ಆರು ತಿಂಗಳ ಬೆಳೆಗೂ ವ್ಯತ್ಯಾಸ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಕಳೆದ ವರ್ಷ ನೆಟೆ ರೋಗದಿಂದ ತೊಗರಿ ಹಾನಿಗೀಡಾಗಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಪ್ರಸಕ್ತ ವರ್ಷ ಕ್ವಿಂಟಾಲ್ ತೊಗರಿಗೆ 10 ಸಾವಿರ ರೂ. ಬೆಲೆ ನಿಗದಿಗೊಳಿಸಿ ರೈತರಿಗೆ ನ್ಯಾಯ ಕೊಡಿಸಬೇಕು. ಬೀದರ್ ಸೇರಿ ರಾಜ್ಯದ ಹಲವೆಡೆ ಅಭಾವದಿಂದ ಭೀಕರ ಬರ ಆವರಿಸಿದೆ. ರಾಜ್ಯ ಸರ್ಕಾರ 130 ತಾಲೂಕುಗಳನ್ನು ಬರಪೀಡಿತ ಘೋಷಿಸಲು ಆಲೋಚಿಸಿದೆ. ಕೇಂದ್ರ ಸರ್ಕಾರ ತಕ್ಷಣ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ರಾಜ್ಯದ ರೈತರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚು ಅನುದಾನ ನೀಡಬೇಕು. ಅಂತರ್ಜಲ ವೃದ್ಧಿಗೆ ಯೋಜನೆ ರೂಪಿಸಬೇಕು. ರೈತರ ಸಾಲ ಮಾನ್ನಾ ಮಾಡಲು ಸಹಕರಿಸಬೇಕು. ಕಾವೇರಿ ಜಲ ವಿವಾದದ ತೀರ್ಪಿನಲ್ಲಿ ನ್ಯಾಯ ಮಂಡಳಿಯಾಗಲಿ ಅಥವಾ ನ್ಯಾಯಾಲಯವಾಗಲಿ ಸಂಕಷ್ಟ ಸೂತ್ರಕ್ಕೆ ಸ್ಪಷ್ಟವಾದ ಮಾನದಂಡ ರೂಪಿಸಿರುವುದಿಲ್ಲ. ಈ ಕಾರಣಕ್ಕೆ ಮಳೆ ಕೊರತೆ ಸಂದರ್ಭದಲ್ಲಿ ನೀರು ಬಿಡುವ ಸಂಕಷ್ಟ ಎದುರಾಗಿದೆ. ಈ ಸಂಬಂಧ ಕೇಂದ್ರ ಪರಿಹಾರ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಪತ್ರವನ್ನು ಜಿಲ್ಲಾಕಾರಿ ಮೂಲಕ ಪ್ರಧಾನಿ, ಸಿಎಂಗೆ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪ್ರಮುಖರಾದ ಕೊಂಡಿಬಾ ಪಾಂಡ್ರೆ, ನಾಗಶೆಟ್ಟಿ ಲಂಜವಾಡೆ, ಖಾಸೀಂ ಅಲಿ, ಬಸವರಾಜ ಅಷ್ಟೂರ, ವಿಠ್ಠಲರಡ್ಡಿ ಆಣದೂರ, ಶಾಂತಮ್ಮಾ ಮೂಲಗೆ, ಮುಖಿಮೊದ್ದೀನ್ ಪಟೇಲ್, ವಿಜಯಕುಮಾರ ಬಾವಗಿ, ಶಾಮಣ್ಣಾ ಬಾವಗೆ ಇತರರಿದ್ದರು.