

ಕಲಬುರಗಿ: ತೊಗರಿ ನಾಡಿನಲ್ಲಿ ಬೆಳೆಯುವ ತೊಗರಿಗೆ ಜಿಐ ಟ್ಯಾಗ್ ಲಭಿಸಿದ ಬಳಿಕವೂ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಯಾಗುತ್ತಿಲ್ಲ ಎಂಬ ದೂರುಗಳನ್ನು ಹೋಗಲಾಡಿಸಲು ವೈಜ್ಞಾನಿಕ ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಕಲಬುರಗಿ ವಿಭಾಗದ ಯಾದಗಿರಿ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಪ್ರವಾಸಕ್ಕೆ ತೆರಳುವ ಮುನ್ನ ನಗರದ ಐವಾನ್-ಇ- ಶಾಹಿ ಅತಿಥಿಗೃಹದಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿ, ಹೆಸರಿಗಿಂತಲೂ ತೊಗರಿಗೆ ಬೆಂಬಲ ಬೆಲೆಯು ಕಡಿಮೆಯಿರುವುದು ಗೊತ್ತಾಗಿದೆ. ಕರೊನಾ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಲಾಕ್ಡೌನ್ ಮುಗಿದ ಬಳಿಕ ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಕೇಂದ್ರ ಸರ್ಕಾರದ ಬೆಲೆ ನಿಗದಿ ಆಯೋಗದ ಮುಂದೆ ರಾಜ್ಯದ ಪರಿಣಿತರಿಂದ ವರದಿ ಮಂಡಿಸಿ ಇನ್ನೂ ಹೆಚ್ಚಿನ ಬೆಂಬಲ ಬೆಲೆ ನಿಗದಿ ಮಾಡುವಂತೆ ಕೋರಲಾಗುವುದು ಎಂದರು.
ಹೆಸರು ಬೆಳೆಗೆ ಪ್ರತಿ ಕ್ವಿಂಟಲ್ಗೆ ಪ್ರಸ್ತುತ 7500 ರೂ,ಗಳಿದ್ದರೆ, ತೊಗರಿಗೆ 5775 ರೂ. ಇದೆ. ತೊಗರಿ ಬೆಳೆಯುವ ಅವಧಿ ಮತ್ತು ನಿರ್ವಹಣಾ ವೆಚ್ಚದ ಆಧಾರದವಾಗಿಟ್ಟು ಕನಿಷ್ಠ 7ರಿಂದ 8 ಸಾವಿರ ರೂ. ಬೆಲೆ ಹೆಚ್ಚಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ತೊಗರಿ ಅಭಿವೃದ್ಧಿ ಮಂಡಳಿ(ಬೇಳೆ ಕಾಳು ಅಭಿವೃದ್ಧಿ ಮಂಡಳಿ)ಯನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಉದ್ದೇಶದಿಂದ ಅದಕ್ಕೆ ಸಶಕ್ತಗೊಳಿಸಲು ಎಲ್ಲ ರೀತಿಯಿಂದಲೂ ಸಬಲೀಕರಣ ಮಾಡಲಾಗುವುದು. ಕರೊನಾ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಲಾಕ್ಡೌನ್ ಮುಗಿದ ಬಳಿಕ ತೊಗರಿ ಮಂಡಳಿಯನ್ನು ಕೆಎಂಎಫ್ ಮಾದರಿಯಲ್ಲಿ ಬಲಗೊಳಿಸಲು ವಿಸ್ತೃತವಾಗಿರುವ ಯೋಜನೆ ರೂಪಿಸಲಾಗುವುದು ಎಂದು ಸಚಿವ ಬಿಸಿಪಿ ತಿಳಿಸಿದರು.
ತೊಗರಿ ಮಂಡಳಿ ಈ ಭಾಗದ ರೈತರ ಅನುಕೂಲಕ್ಕಾಗಿ ರಚನೆ ಮಾಡಲಾಗಿದೆ. ಅದರ ಲಾಭ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಬಂದಾಗ ಈ ಕುರಿತು ಸಮಗ್ರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.