ತೊಗರಿ ಬೀಜ ಖರೀದಿಗೆ ಮುಗಿಬಿದ್ದ ರೈತರು

27 yerriswamy 05
Published on

ಬಳ್ಳಾರಿ : ಇಲ್ಲಿನ ಕೆಸಿ ರಸ್ತೆಯ ರಾಸಯನಿಕ ಗೊಬ್ಬರ ಹಾಗೂ ಬೀಜಗಳ ಮಾರಾಟ ಮಳಿಗೆಗಳ ಮುಂದೆ ತೊಗರಿ ಬೀಜಗಳನ್ನು ರೈತರು ಸರದಿಯಲ್ಲಿ ನಿಂತು ಖರೀದಿಸಿದರು.
ಕಳೆದ ಕೆಲದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿವುದರಿಂದ ಕೃಷಿ ಚಟುವಟಿಕೆಗಳು ಆರಂಭವಾಗಿದೆ. ಪ್ರತಿ ವರ್ಷ ಮೆಣಸಿನಕಾಯಿ ಬೆಳೆಯಲು ಆಸಕ್ತಿ ತೋರುತ್ತಿದ್ದ ರೈತರು ಈ ಬಾರಿ ತೊಗರಿ ಬೆಳೆಯಲು ಮುಂದಾಗಿದ್ದಾರೆ. ನೆರೆಯ ಆಂಧ್ರಪ್ರದೇಶದ ಆಲೂರು, ಉರವಕೊಂಡ, ಗುಂತಕಲ್ಲು , ರಾಯದುರ್ಗಂ, ಆದೋನಿ ಸೇರಿದಂತೆ ಹಲವು ತಾಲೂಕಿನ ರೈತರಿಗೆ ಗುಣಮಟ್ಟದ ತೊಗರಿ ಬೀಜ ದೊರೆಯದೆ ಇರುವುದು ಹಾಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಬಳ್ಳಾರಿ ನಗರಕ್ಕೆ ಆಗಮಿಸಿ ತೊಗರಿ ಬೀಜ ಕೊಳ್ಳುತ್ತಿದ್ದಾರೆ. ಒಂದು ಕಿಲೋ ತೊಗರಿ ಬೀಜ ಎರಡು ನೂರು ರೂ. ಮಾರಾಟ ಮಾಡಲಾಗುತ್ತಿದೆ. ನಾ ಮುಂದು ತಾ ಮುಂದು ಅಂಗಡಿ ಮುಂಭಾಗದ ರಸ್ತೆಯಲ್ಲಿ ಮುಗಿಬಿದ್ದರಿಂದ ಟ್ರಾಫಿಕ್ ಸಮಸ್ಯೆಯಾಗಿತ್ತು. ಪೊಲೀಸರು ಆಗಮಿಸಿ ಟ್ರಾಫಿಕ್ ಸಮಸ್ಯೆ ಸರಿಪಡಿಸಿ ಸರತಿಯಲ್ಲಿ ನಿಲ್ಲಿಸಿದರು. ಬಹುತೇಕರು ನಮ್ಮ ಜಿಲ್ಲೆಯವರೆಗಿಂತ ಆಂಧ್ರಪ್ರದೇಶದ ರೈತರೇ ಹೆಚ್ಚಾಗಿ ಖರೀದಿ ಮಾಡುತ್ತಿದ್ದರು. ಇದರ ಜತೆಯಲ್ಲಿ ಕೆಲ ರೈತರು ಯೂರಿಯ, ಕಾಂಪ್ಲೆಕ್ಸ್ ಗೊಬ್ಬರವನ್ನು ಕೂಡ ಖರೀದಿ ಮಾಡಿದರು. ಬೆಳೆದ ಬೆಳೆ ನಂತರ ಫಸಲನ್ನು ಕೂಡ ನಗರ ಎಪಿಎಂಸಿ ಮಾರುಕಟ್ಟೆ ಗೆ ತಂದು ಮಾರಾಟ ಮಾಡುವುದು ಸಾಮಾನ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net