ತೊಗರಿ ಖರೀದಿಯಲ್ಲಿ ಅಕ್ರಮ; ಕೆರಳಿದ ರೈತರು

26 Hulsur 1
ಹುಲಸೂರು ಸಮೀಪದ ಕೇಸರಜವಳಗಾ ಪಿಕೆಪಿಎಸ್‌ನಲ್ಲಿ ತೊಗರಿ ಖರೀದಿಯಲ್ಲಿ ಅವ್ಯವಹಾರ ಮಾಡಿದ್ದನ್ನು ವಿರೋಧಿಸಿ ಬುಧವಾರ ಸಂಜೆ ಸಂಘದ ಎದುರು ರೈತರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
Published on

ಹುಲಸೂರು: ಸಮೀಪದ ಭಾಲ್ಕಿ ತಾಲೂಕಿನ ಕೇಸರಜವಳಗಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪಿಕೆಪಿಎಸ್)ದಲ್ಲಿ ಬೆಂಬಲ ಬೆಲೆಯಡಿ ತೊಗರಿ ಖರೀದಿಸುವ ತೂಕ ಯಂತ್ರದಲ್ಲಿ ಕ್ವಿಂಟಾಲ್‌ಗೆ ೩ ಕೆಜಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಸಿಡಿದೆದ್ದ ರೈತರು ಬುಧವಾರ ಸಂಜೆ ಸಂಘಕ್ಕೆ ಬೀಗ ಹಾಕಲು ಮುಂದಾದರು.

ಸರ್ಕಾರದಿಂದ ತೊಗರಿ ಖರೀದಿ ಕೇಂದ್ರ ತೆರೆಯಲಾಗಿದೆ. ರೈತರಿಂದ ನೋಂದಣಿ ಮತ್ತು ಮಾರಾಟಕ್ಕೆ ನಿರಾಸಕ್ತಿ ಮಧ್ಯೆ ಇಂಥ ಪ್ರಮಾದ ಆಗಿರುವುದನ್ನು ನೋಡಿದರೆ ಆಡಳಿತದ ಮೇಲೆ ನಮಗೆ ಭರವಸೆ ಇಲ್ಲದಂತಾಗಿದೆ. ಜಿಲ್ಲಾಡಳಿತ, ಸಹಕಾರ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನ್ಯಾಯ ಕೊಡಿಸಬೇಕು ಎಂದು ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೈಲಾಶ ವಟಂಬೆ, ಪ್ರಮುಖರಾದ ಬಾಬುರಾವ, ವಿಶ್ವನಾಥ ಕರಕಲ್ಲೆ, ಬಸವರಾಜ ಖಂಡಳೆ, ಕಲ್ಲಪ್ಪ ಕಟ್ಟಾಳೆ, ವೈಜಿನಾಥ ಅವಳೆ, ರವಿ ಚೋರಮಲ್ಲೆ, ಬಾಬುರಾವ ಹಜಾರೆ, ರಾಜಕುಮಾರ ಮಡಿವಾಳ, ನಾಮದೇವ ಮಳಚಾಪುರೆ, ಮಹೇಶ ವಟಂಬೆ ಸೇರಿ ಲಾಧಾ, ಸಾಯಗಾಂವ, ಕಾದರಾಬಾದ ವಾಡಿ ರೈತರು ಇದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಮೇಹಕರ್ ಠಾಣೆ ಪಿಎಸ್‌ಐ ಶಿವಕುಮಾರ ಬಳತೆ ಸ್ಥಳಕ್ಕೆ ದೌಡಾಯಿಸಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net