

ಕುರುಗೋಡು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಸರ್ಕಾರಿ ಕಚೇರಿಗಳ ಭೇಟಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸ್ ಠಾಣೆಗೆ ಶನಿವಾರ ಭೇಟಿ ನೀಡಿದ್ದರು.
ಎಎಸ್‌ಐಗಳಾದ ಆನಂದ ರೆಡ್ಡಿ ಮತ್ತು ಶೇಕ್ಷಾವಲಿ ಠಾಣೆಯ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು. ಪೊಲೀಸ್ ಠಾಣೆ ಬಗ್ಗೆ ಭಯ ಬೇಡ. ಎಲ್ಲ ಸರ್ಕಾರಿ ಕಚೇರಿಗಳಂತೆ ಪೊಲೀಸ್ ಠಾಣೆಯೂ ಒಂದಾಗಿದ್ದು, ನೊಂದು ಬಂದ ಜನರಿಗೆ ರಕ್ಷಣೆ ನೀಡಿ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಪೊಲೀಸರು ಮಾಡುತ್ತಾರೆ ಎಂದರು.
ಮಹಿಳೆಯರ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಕಾನೂನು ಜಾರಿಗೆ ತಂದಿವೆ. ಮಹಿಳೆಯರು ಮನೆಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆ ಎದುರಿಸುತ್ತಿದ್ದರೆ ಭಯಪಡದೆ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಬೇಕು. ಗ್ರಾಮಗಳಲ್ಲಿ ಬಾಲ್ಯ ವಿವಾಹಗಳು ನಡೆಯುವುದು ಗಮನಕ್ಕೆ ಬಂದರೆ ಕೂಡಲೆ ಠಾಣೆಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.
ಬಳಿಕ ಸದಸ್ಯರು ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿದರು. ಠಾಣಾಧಿಕಾರಿ ಶಿವಕುಮಾರ್ ಅಗ್ನಿಶಾಮಕ ಠಾಣೆಯ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು. ಗ್ಯಾಸ್ ಸಿಲಿಂಡರ್, ಗುಡಿಸಲು ಮತ್ತು ಹುಲ್ಲಿನ ಬಣವೆಗಳಿಗೆ ಬೆಂಕಿ ಬಿದ್ದರೆ ಯಾವ ರೀತಿ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಪೊಲೀಸ್ ಠಾಣೆ ಸಿಬ್ಬಂದಿ ಕೆ.ಶ್ರೀನಿವಾಸ, ನವೀನ, ನೀಲಮ್ಮ, ಬಿ.ಜ್ಯೋತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಪ್ರಿಯಾ, ರೇಖಾ, ಮೇಲ್ವಿಚಾರಕಿ ಚಂದ್ರಕಲಾ, ಪ್ರಭು ಇದ್ದರು.