

ಅಥಣಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಹಾಗೂ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಇಂದು ವಿಶ್ವದ ಅನೇಕ ರಾಷ್ಟ್ರಗಳು ಭಾರತಕ್ಕಿಂತ ಕಡಿಮೆ ಬೆಲೆಗೆ ಇಂಧನ ಮಾರಾಟ ಮಾಡುತ್ತಿವೆ. ಆದರೆ, ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಭಾರತದಲ್ಲಿ ಇಂದು ಸಾಮಾನ್ಯ ಜನ ಇಂಧನ ಖರೀದಿಗೂ ಮುನ್ನ ವಿಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಬೆಲೆ ಏರಿಕೆ ಮಾಡಿದಾಗ ಬಿಜೆಪಿ ಮುಖಂಡರು ಕೈ ಪಾಳಯದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಸದ್ಯ ಬೆಲೆ ಏರಿಕೆ ಮಾಡುತ್ತಿದ್ದರೂ ಬಿಜೆಪಿಯ ಹಿರಿಯ ನಾಯಕರು ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ಸರ್ಕಾರ ಬೆಲೆ ಇಳಿಕೆ ಮಾಡಿ ಜನರ ಹಿತ ಕಾಪಾಡಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿ, ಲಾಕ್‌ಡೌನ್ ನಡುವೆಯೂ ಇಂಧನ ಬೆಲೆ ಹೆಚ್ಚಳ ಮಾಡುವ ಮೂಲಕ ಸರ್ಕಾರಗಳು ಜನರನ್ನು ಕಷ್ಟಕ್ಕೆ ತಳ್ಳಿವೆ. ಪರಿಣಾಮ ಸಾರ್ವಜನಿಕರಿಗೆ ನಿತ್ಯ ಜೀವನ ನಡೆಸುವುದು ಸವಾಲಾಗುತ್ತಿದೆ. ಶೀಘ್ರ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಚಿಕ್ಕೋಡಿ ಜಿಲ್ಲಾ ಯೂಥ್ ಅಧ್ಯಕ್ಷ ಯಲ್ಲಪ್ಪ ಶಿಂಗೆ, ಸಿದ್ದಾರ್ಥ ಶಿಂಗೆ, ಎಸ್.ಕೆ.ಬುಟಾಳಿ, ಬಸವರಾಜ ಬುಟಾಳಿ, ಅಸ್ಲ್‌ಂ ನಾಲಬಂಧ, ಶ್ರೀಕಾಂತ ಪೂಜಾರಿ, ಧರೆಪ್ಪ ಠಕ್ಕಣ್ಣವರ, ಸತ್ಯಪ್ಪ ಬಾಗೆಣ್ಣವರ, ರಮೇಶ ಸಿಂಧಗಿ, ಸುರೇಶ ಪಾಟೀಲ, ರಾವಸಾಬ್ ಐಹೊಳೆ, ಸೈಯ್ಯದ್ ಗದ್ಯಾಳ, ವಿ. ಯಳಮಲ್ಲಿ, ಸುನೀಲ ಸಂಕ, ಶಿವು ಗುಡ್ಡಾಪುರ, ಶೇಖರ ಕೋಲಾರ, ಮಂಜು ಹೊಳಿಕಟ್ಟಿ, ರವಿ ಬಡಕಂಬಿ ಮತ್ತಿತರರು ಇದ್ದರು. ಪಟ್ಟಣದ ಗಚ್ಚಿನಮಠದಿಂದ ಆರಂಭವಾದ ಸೈಕಲ್ ಜಾಥಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಂಬೇಡ್ಕರ್ ವೃತ್ತದಲ್ಲಿ ಸಮಾರೋಪಗೊಂಡಿತು.