ತೈಲ ಬೆಲೆ ಏರಿಕೆ ಖಂಡಿಸಿ ಹಾಸನದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

ತೈಲ ಬೆಲೆ ಏರಿಕೆ ಖಂಡಿಸಿ ಹಾಸನದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ
Published on

ಹಾಸನ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷದಿಂದ ಬುಧವಾರ ಬೃಹತ್ ಪ್ರತಿಭಟನೆ ಮಾಡಲಾಯಿತು. ಇದೇ ವೇಳೆ ಪ್ರತಿಭಟನಾಕಾರರು ಎತ್ತಿನಗಾಡಿ, ಸೈಕಲ್ ಹಾಗೂ ನಾಲ್ಕು ಚಕ್ರದ ವಾಹನವನ್ನು ಹಗ್ಗದಿಂದ ಎಳೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮೂಲಕ ಕಾಂಗ್ರೆಸ್ ಪಕ್ಷ ಜನರಿಗೆ ಚಿಪ್ಪನ್ನು ಕೊಡುವ ಕೆಲಸ ಮಾಡುತ್ತಿದೆ. ಗುರುವಾರ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ. ಈಗ ಎತ್ತಿನ ಗಾಡಿಗಳ ಮೂಲಕ ಡಿಸಿ ಕಚೇರಿವರೆಗೂ ತೆರಳಿ ಮನವಿ ಸಲ್ಲಿಸುತ್ತೇವೆ. ಬಡವರ ಬಗ್ಗೆ ಕಾಳಜಿ, ಪ್ರೀತಿ ಇದ್ದರೆ ಉತ್ತಮವಾದ ಭಾಗ್ಯಗಳನ್ನು ಕೊಡಬೇಕು. ಜನರಿಗೆ ಒಳ್ಳೆಯದು ಮಾಡಬೇಕು ಎಂಬ ಭಾವನೆ ಮನಸ್ಸಿದ್ದರೇ ಇಂದು ರಾತ್ರಿಯಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಬೇಕು. ಮುಂದಿನ ದಿನಗಳಲ್ಲಿ ತೈಲ ಬೆಲೆ ಕಡಿಮೆ ಮಾಡದೇ ಹೋದರೇ ರಾಜ್ಯಾದ್ಯಂತ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಎಸ್.ಟಿ. ನಿಗಮದಡಿ 189 ಕೋಟಿ ರೂ.ಗಳ ಭ್ರಷ್ಟಾಚಾರ ನಡೆದಿದ್ದು, ಈಗಾಗಲೇ ಸಚಿವರ ತಲೆದಂಡ ಆಗಿದೆ. ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟದ ಹಲವು ಸಚಿವರು ಕೂಡ ಈ ಭ್ರಷ್ಟಾಚಾರದಲ್ಲಿ ಬಾಗಿಯಾಗಿದ್ದಾರೆ. ಕಾಂಗ್ರೆಸ್ ಕೊಟ್ಟಿರುವ ಭಾಗ್ಯ ಕೇವಲ ಕಣ್ಣು ಹೊರೆಸುವ ಭಾಗ್ಯಗಳಾಗಿವೆ ಎಂದು ಇಡೀ ದೇಶದ ಜನತೆ ಪರಿಗಣಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ಬಹುಮತದಿಂದ ಆರಿಸಿದ್ದಾರೆ ಎಂದು ಹೇಳಿದರು.
ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಹಲವಾರು ಭಾಗ್ಯಗಳ ಆಸೆ-ಆಮಿಷಗಳನ್ನು ತೋರಿಸಿ ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್ ಸರ್ಕಾರವು ಇಡೀ ಕರ್ನಾಟಕ ಜನತೆಗೆ ಅದರಲ್ಲೂ ಬಡವರ ಹೊಟ್ಟೆಗೆ ಹೊಡೆಯುವಂತಹ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ಹಲವಾರು ಯೋಜನೆಗಳನ್ನು ಕೊಟ್ಟರೂ ಕೂಡ ಇಡೀ ಕರ್ನಾಟಕ ರಾಜ್ಯದಲ್ಲಿ ಬಡವರ ಮೇಲೆ ತೆರಿಗೆಯನ್ನು ಹೆಚ್ಚಾಗಿ ಏರುವ ಕೆಲಸ ಮಾಡಿದೆ. ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಲಾಗಿದೆ ಎಂದರು.
ಇಡೀ ಕರ್ನಾಟಕದ ಜನತೆಗೆ ಕಾಂಗ್ರೆಸ್ ಸರ್ಕಾರ ಚಿಪ್ಪು ಕೊಡುವ ಕೆಲಸ ಮಾಡಿದೆ. ದಲಿತರ ಪರವಾಗಿದ್ದೇವೆ, ಪರಿಶಿಷ್ಟ ಜಾತಿ, ಪಂಗಡದ ಪರವಾಗಿದ್ದೇವೆ ಎಂದು ಹೇಳುವ ಈ ಸರ್ಕಾರವು ದಲಿತರ ಅಭಿವೃದ್ಧಿಗೆ ಮೀಸಲಾದ 25 ಸಾವಿರ ಕೋಟಿ ಹಣವನ್ನು ದುರ್ಬಳಕೆ ಮಾಡಿದ್ದು, ಪರಿಶಿಷ್ಟ ಜಾತಿಯವರ 187 ಕೋಟಿ ಹಣವನ್ನು ಕೂಡ ದುರ್ಬಳಕೆ ಮಾಡಿ ಬೇರೆ ಬೇರೆಯವರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮತ್ತು ಶಾಸಕ ಸಿಮೆಂಟ್ ಮಂಜು, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ ಸೇರಿದಂತೆ ಇತರರು ಸೈಕಲ್ ಹೊಡೆದುಕೊಂಡು ನಂತರ ಎತ್ತಿನಗಾಡಿವ ಮೇಲೆ ಸವಾರಿ ಮಾಡಿ ತೈಲ ಬೆಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಎನ್.ಆರ್. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಅಮಿತ್ ಶೆಟ್ಟಿ, ಗಿರೀಶ್, ವೇಣುಕುಮಾರ್, ಶೋಭನ್ ಬಾಬು, ಎಚ್.ಎನ್. ನಾಗೇಶ್, ಆರ್.ಮೋಹನ್, ರೇಣುಕುಮಾರ್, ಪುನೀತ್, ಯೋಗೀಶ್, ಹರ್ಷಿತ್, ಅಡಗೂರು ಬಸವರಾಜು, ಬಿ.ಎಚ್. ನಾರಾಯಣಗೌಡ, ಆನಂದ್, ಅಶ್ವಥ್, ಉಮಾ ರವಿಪ್ರಕಾಶ್, ನೇತ್ರಾ ಮಂಜುನಾಥ್, ಕುಸಮಾ, ಶೋಭಾ ಗಣೇಶ್, ಸುಶೀಲಾ ಅಣ್ಣಪ್ಪ, ಎಸ್.ಡಿ. ಚಂದ್ರು, ಗಗನ್ ಗಾಂಧಿ, ಶಿವಕುಮಾರ್, ರಾಜಕುಮಾರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net