ತೇಜಸ್ವಿ ನೆನಪು’ ಕಾರ್ಯಕ್ರಮ ಉದ್ಘಾಟಿಸಿದ ಡಾ.ಎಚ್.ಎಲ್.ಮಲ್ಲೇಶಗೌಡ

ತೇಜಸ್ವಿ ನೆನಪು’ ಕಾರ್ಯಕ್ರಮ ಉದ್ಘಾಟಿಸಿದ ಡಾ.ಎಚ್.ಎಲ್.ಮಲ್ಲೇಶಗೌಡ
Published on

ಹಾಸನ: ಪೂರ್ಣಚಂದ್ರ ತೇಜಸ್ವಿ ಮತ್ತು ಕುವೆಂಪು ಅವರು ನಾಡಿಗೆ ನೀಡಿದ ಅತ್ಯಂತ ಶ್ರೇಷ್ಠ ಕೃತಿಕಾರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಅಭಿಪ್ರಾಯಪಟ್ಟರು.
ನಗರದ ಬೆಸ್ಟ್ ಕಾಮರ್ಸ್ ಕಾಲೇಜಿನಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಕಾಲೇಜಿನ ಸಹಯೋಗದಲ್ಲಿ ಪೂಚಂತೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ’ತೇಜಸ್ವಿ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುವೆಂಪು ಪ್ರಬಂಧ, ಕತೆ, ವಿಮರ್ಶೆ, ಕಾವ್ಯ, ನಾಟಕ ಸೇರಿದಂತೆ ಎಲ್ಲ ಪ್ರಾಕಾರಗಳ ಜಗತ್ತಿನ ಏಕೈಕ ಶ್ರೇಷ್ಠ ಸಾಹಿತಿ. ಅಂತಹ ತಂದೆಯ ನೆರಳು, ಹೆಸರು, ಆಸ್ತಿ, ಕೀರ್ತಿ ಆಶ್ರಯಿಸದೇ ಸ್ವಯಂ ಶಕ್ತಿಯಿಂದ ಅಷ್ಟೇ ಎತ್ತರಕ್ಕೆ ಬೆಳೆದ ಮತ್ತೊಂದು ಅಪರೂಪದ ವ್ಯಕ್ತಿತ್ವ ತೇಜಸ್ವಿ ಎಂದರು.
ಇನ್ನೆರಡು ವರ್ಷಗಳು ತೇಜಸ್ವಿ ಬದುಕಿದ್ದರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಲಿತ್ತು. ತಂದೆ-ಮಗ ಇಬ್ಬರಿಗೂ ಜ್ಞಾನಪೀಠ ದೊರಕಿತು ಎನ್ನುವ ಸೌಭಾಗ್ಯ ತಪ್ಪಿ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಆರ್.ಪ್ರಸನ್ನಕುಮಾರ್ ಮಾತನಾಡಿ, ಜಿಲ್ಲೆಯ ಹಿರಿಯ ರೈತ ಹೋರಾಟಗಾರ ಕೊಟ್ಟೂರು ಶ್ರೀನಿವಾಸ್ ಅವರ ಮೂಲಕ ತೇಜಸ್ವಿ ಅವರ ಪರಿಚಯ, ಪುಸ್ತಕಗಳು ನಮಗೆ ದೊರಕಿದವು. ಕರ್ವಾಲೋನಂತಹ ಶ್ರೇಷ್ಠ ಕೃತಿ, ಮಿಲೇಮಿಯಂ ಸರಣಿಯ ಪುಸ್ತಕಗಳು ಹೊಸ ಓದುಗರನ್ನೇ ಸೃಷ್ಟಿಸಿದವು. ಇಂದಿನ ವಿದ್ಯಾರ್ಥಿಗಳು ತೇಜಸ್ವಿ ಕೃತಿಗಳ ಮೂಲಕ ಸಾಹಿತ್ಯ ಓದು ಆರಂಭಿಸಬೇಕು ಎಂದರು.
ಬೆಸ್ಟ್ ಕಾಲೇಜಿನ ಪ್ರಾಂಶುಪಾಲ ನವೀನ್ ಮಾತನಾಡಿ,ಪುಸ್ತಕ ಓದುವ ಸಂಸ್ಕೃತಿ ಮರೆಯಾಗುತ್ತಿದೆ.ಇಂದಿನ ವಿದ್ಯಾರ್ಥಿಗಳು ಅಂಕಗಳ ಹಿಂದೆ ಬಿದ್ದು, ಬದುಕಿನ ಮೌಲ್ಯ ಕಲಿಸುವ ಸಾಹಿತ್ಯದ ಅರಿವನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ ಇದೊಂದು ಆತಂಕಕಾರಿ ಸಂಗತಿ ಎಂದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ, ಮಾರ್ಗದರ್ಶಿ ಸಮಿತಿ ಸದಸ್ಯ ಕಮಲಮ್ಮ, ಪ್ರಕಾಶ್ ಮೇಗಲಕೇರಿ, ಸಮಾಜ ಸೇವಕಿ ಕಾಂಚನಾ ಮಾಲಾ, ಕಸಾಪ ಹಾಸನ ತಾಲೂಕು ಅಧ್ಯಕ್ಷ ಕೆ.ಆರ್ ಮಮತೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರ್,ಸಹ ಕಾರ್ಯದರ್ಶಿ ನಾಗೇಶ್ ಎಂ.ಡಿ, ಉಪನ್ಯಾಸಕ ವಿಕ್ರಮ್,ಪುನೀತ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net