ತೆೆರಕಣಾಂಬಿ ಸಂತೆಯಲ್ಲಿ ದಲ್ಲಾಳಿಗಳ ಹಾವಳಿ

15-MAY-GPT-1
Published on

ಗುಂಡ್ಲುಪೇಟೆ: ರಾಜ್ಯದಾದ್ಯಂತ ತೆಂಗಿನ ಬೆಲೆ ಗಗನಕ್ಕೇರುತ್ತಿದ್ದರೂ ತಾಲೂಕಿನ ತೆರಕಣಾಂಬಿ ಸಂತೆಯಲ್ಲಿ ದಲ್ಲಾಳಿಗಳು ಅರ್ಧಬೆಲೆಗೆ ಖರೀದಿಸುವ ಮೂಲಕ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನಿರುವುದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೋಟಗಾರಿಕೆ ಬೆಳೆಯಾದ ತೆಂಗನ್ನು ತಾಲೂಕಿನ 1,480 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಬಹುತೇಕ ರೈತರು ತಮ್ಮ ಉತ್ಪನ್ನಗಳನ್ನು ಸಾರಾಸಗಟಾಗಿ ಎಳನೀರಿನ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಗೆ ಬರುತ್ತಿದ್ದ ಕಾಯಿಯ ಪ್ರಮಾಣ ತುಂಬಾ ಕಡಿಮೆಯಾಗಿದೆ. ಹೀಗಾಗಿ ಕಳೆದ ಆರೇಳು ತಿಂಗಳಿಂದ ತೆಂಗಿನಕಾಯಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ.

ಕಳೆದ ವರ್ಷ 15 ರಿಂದ 25 ರೂ.ವರೆಗೆ ಮಾರಾಟವಾಗುತ್ತಿದ್ದ ತೆಂಗಿನ ಬೆಲೆ ಈ ವರ್ಷ ನಿಧಾನಕ್ಕೆ ಏರಿಕೆಯಾಗುತ್ತಿದ್ದು, ಸದ್ಯ ಕಿಲೋಗೆ 75 ರೂ.ಗೇರಿದೆ. ಚಿಲ್ಲರೆ ಮಾರಾಟಗಾರರು 100 ರೂ.ವರೆಗೂ ಮಾರಾಟ ಮಾಡುತ್ತಿದ್ದಾರೆ. ಆದರೆ ಪ್ರತಿ ಗುರುವಾರ ತಾಲೂಕಿನ ಎಪಿಎಂಸಿ ಆವರಣದಲ್ಲಿ ನಡೆಯುವ ಸಂತೆಯಲ್ಲಿ ಕಳೆದ ವಾರ 50ರವರೆಗೆ ಮಾರಾಟವಾಗಿದ್ದ ತೆಂಗಿನ ಬೆಲೆ ಈ ವಾರದ ಸಂತೆಯಲ್ಲಿ ಮಾತ್ರ 45ಕ್ಕಿಂತ ಮೇಲೇರಲು ಮಧ್ಯವರ್ತಿಗಳು ಬಿಡದ ಪರಿಣಾಮ ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಭೂಲೋಕದ ಕಲ್ಪವೃಕ್ಷ ಎಂದು ಕರೆಸಿಕೊಳ್ಳುತ್ತಿರುವ ತೆಂಗು ಮಧ್ಯವರ್ತಿಗಳ ಪಾಲಿಗೆ ಮಾತ್ರ ಕಲ್ಪವೃಕ್ಷವಾಗುತ್ತಿದ್ದು, ಬೆಳೆಗಾರರಿಗೆ ಚಿಪ್ಪೇ ಗತಿ ಎಂಬಂತಾಗಿದೆ.

ದುಬಾರಿಯಾದ ಕಟಾವು:

ತೆಂಗಿನ ಮರಗಳಿಗೆ ಗೊಬ್ಬರ ನೀರುಣಿಸುವುದು ಹೊರತುಪಡಿಸಿದರೂ ಮರಗಳಿಂದ ತೆಂಗಿನಕಾಯಿ ಕೀಳಿಸಿ ಸುಲಿಸಿ ಮಾರುಕಟ್ಟೆಗೆ ತರುವುದು ತುಂಬಾ ದುಬಾರಿಯಾಗುತ್ತಿದೆ. ಕಾಯಿ ಕೀಳಲು ಪ್ರತಿ ಮರಕ್ಕೆ 30 ರೂ., ಸಿಪ್ಪೆ ಸುಲಿಯಲು 1 ರೂ., ಕಾಯಿಗಳನ್ನು ಗುಡ್ಡೆಹಾಕಲು ಮತ್ತು ಮಾರುಕಟ್ಟೆಗೆ ಕೊಂಡೊಯ್ಯಲು ಕಾರ್ಮಿಕರಿಗೆ ಕೊಡುವ ಕೂಲಿ ಸೇರಿದಂತೆ ಪ್ರತಿ ಕಾಯಿಗೆ 5 ರೂ. ವೆಚ್ಚವಾಗುತ್ತಿದೆ. ಆದರೆ ಸಂತೆಯಲ್ಲಿ ಮಧ್ಯವರ್ತಿಗಳು ಕಡಿಮೆ ಬೆಲೆಗೆ ಕೇಳುವ ಮೂಲಕ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತಿದ್ದಾರೆ. ಆದ್ದರಿಂದ ಎಪಿಎಂಸಿ ಅಧಿಕಾರಿಗಳು ಇನ್ನಾದರೂ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಬೆಳೆಗಾರರಿಗೆ ನ್ಯಾಯವಾದ ಬೆಲೆ ದೊರಕಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಫಸಲಿಗೆ ಕೋತಿಗಳ ಕಾಟ

ಪ್ರತಿ ವರ್ಷವೂ ಕಾರ್ಮಿಕರ ಕೊರತೆಯಿಂದ ಕಾಯಿ ಕೀಳಿಸುವುದು, ಸಿಪ್ಪೆ ಸುಲಿಸುವುದು, ಮಾರುಕಟ್ಟೆಗೆ ಸಾಗಿಸುವುದು ಬೆಳೆಗಾರರಿಗೆ ದುಬಾರಿಯಾಗಿ ಪರಿಣಮಿಸುತ್ತಿದೆ. ನೆರೆಯ ಕೇರಳ ಮತ್ತು ತಮಿಳುನಾಡುಗಳಲ್ಲಿ ತೆಂಗಿನ ಇಳುವರಿ ಕಡಿಮೆಯಾದ ಪರಿಣಾಮ ತಾಲೂಕಿನ ತೆಂಗಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ವರ್ಷದವರೆಗೂ ಎಳನೀರನ್ನು 10-12 ರೂ.ಗೆ ಖರೀದಿಸುತ್ತಿದ್ದ ವ್ಯಾಪಾರಿಗಳು ಈ ಬಾರಿ ರೈತರಿಗೆ 35 ರಿಂದ 40 ರೂ. ಕೊಟ್ಟು ರೈತರ ತೋಟಗಳಲ್ಲಿಯೇ ಖರೀದಿಸುವಂತಾಗಿದೆ. ಇದರಿಂದ ಯಾವ ತೋಟಗಳಲ್ಲಿಯೂ ತೆಂಗಿನಕಾಯಿ ದೊರಕದಂತಾಗಿದೆ. ಈ ನಡುವೆ ಕೋತಿಗಳ ಕಾಟ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ತೆಂಗಿನ ಬೆಲೆ ಏರಿಕೆಗೆ ಕಾರಣವಾಗುತ್ತಿದೆ.

ಮಾರುಕಟ್ಟೆ ಸಮಸ್ಯೆ: ತಾಲೂಕಿನ ಬಹುತೇಕ ರೈತರು ತಮ್ಮ ಜಮೀನುಗಳಲ್ಲಿ ತೆಂಗು ಬೆಳೆಯುತ್ತಿದ್ದರೂ ಮಾರುಕಟ್ಟೆಯ ಸಮಸ್ಯೆಯಿಂದ ಲಾಭ ಗಳಿಸಲು ಸಾಧ್ಯವಾಗುತ್ತಿಲ್ಲ. ಜಮೀನುಗಳಿಗೆ ಬರುವ ವರ್ತಕರಿಗೆ ಮಾರಾಟ ಮಾಡಬೇಕು. ಇಲ್ಲವೆ ಸಂತೆಗಳಿಗೆ ಕೊಂಡೊಯ್ದು ದಲ್ಲಾಳಿಗಳು ನಿಗದಿಸಿದ ಬೆಲೆಗೆ ಮಾರಾಟ ಮಾಡಬೇಕಾಗಿದೆ. ದೊಡ್ಡ ಪ್ರಮಾಣದಲ್ಲಿ ಕಾಯಿ ಕೀಳುವ ರೈತರು ವಾರಕ್ಕೊಮ್ಮೆ ನಡೆಯುವ ನೆರೆಯ ತಾಳವಾಡಿಯ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಬೇಕಾಗಿದೆ. ತಮಿಳುನಾಡು ಸರ್ಕಾರದ ವತಿಯಿಂದ ನಡೆಯುವ ಈ ಮಾರುಕಟ್ಟೆಯಲ್ಲಿ ಕಮಿಷನ್ ಇಲ್ಲದೆ ಮಾರಾಟ ಮಾಡಲು ಸಾಧ್ಯವಿರುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಿದ್ದರೂ ಸಾಗಣೆ ವೆಚ್ಚ ಹೆಚ್ಚಳವಾಗುತ್ತಿದೆ. ಇದರಿಂದ ಸಣ್ಣ ಪ್ರಮಾಣದಲ್ಲಿ ಕಾಯಿ ಮಾರಾಟ ಮಾಡುವ ರೈತರು ಸಂತೆಗಳನ್ನೇ ಅವಲಬಿಸುವಂತಾಗಿದೆ.

ಮಾರುಕಟ್ಟೆಯಲ್ಲಿ ತೆಂಗಿನ ಬೆಲೆಏರಿಕೆಯಾಗುತ್ತಿದ್ದರೂ ದಲ್ಲಾಳಿಗಳು ಮಾತನಾಡಿಕೊಂಡು ಕಡಿಮೆ ಬೆಲೆ ನಿಗದಿ ಮಾಡುತ್ತಿದ್ದಾರೆ. ತಾಲೂಕಿನ ತೆರಕಣಾಂಬಿಯ ಎಪಿಎಂಸಿ ಆವರಣದಲ್ಲಿ ಸಂತೆ ನಡೆಯುತ್ತಿದ್ದರೂ ಅಧಿಕಾರಿಗಳು ದಲ್ಲಾಳಿಗಳನ್ನು ನಿಯಂತ್ರಿಸುತ್ತಿಲ್ಲ. ಇದರಿಂದ ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಕೆ.ಸಿ.ಮಹೇಶ್ ಕೊಡಸೋಗೆ ಕೋತಿಗಳ ಕಾಟದಿಂದ ಬಹುತೇಕ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಇವುಗಳನ್ನು ಹಿಡಿದು ಕಾಡಿಗೆ ಬಿಟ್ಟರೂ ಮತ್ತೆ ಹಿಂದುರುಗುತ್ತಿವೆ. ಇದರಿಂದ ಹೆಚ್ಚಿನ ಬೆಳೆಗಾರರು ತೆಂಗಿನ ಕಾಯಿಗೆ ಕಾಯದೆ ಎಳನೀರು ಮಾರಾಟ ಮಾಡಿ ಕೈತೊಳೆದುಕೊಳ್ಳುವಂತಾಗಿದೆ. ಹಾಗೂ ಹೀಗೂ ಕಾಯಿ ಬಲಿಯುವವರೆಗೆ ಕಾದು ಸಂತೆಗೆ ಕೊಂಡೊಯ್ದರೆ ಮಧ್ಯವರ್ತಿಗಳ ಕಾಟದಿಂದ ನಷ್ಟ ಅನುಭವಿಸುವಂತಾಗಿದೆ. ಟಿ.ಎಂ.ಮಹದೇವಸ್ವಾಮಿ ತೆರಕಣಾಂಬಿ ನೂತನ ಎಪಿಎಂಸಿ ಕಾಯ್ದೆ ಜಾರಿಗೆ ಬಂದ ನಂತರ ಬಹುತೇಕ ತೆಂಗಿನ ಕಾಯಿ ವ್ಯಾಪಾರ ರೈತರ ಜಮೀನುಗಳಲ್ಲಿಯೇ ಆಗುತ್ತಿದ್ದು, ಸಂತೆಗೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಬರುತ್ತಿದೆ. ಬೆಲೆ ಕಡಿಮೆ ಮಾಡಿರುವ ಬಗ್ಗೆ ರೈತರು ದೂರು ನೀಡಿದರೆ ವ್ಯಾಪಾರಿಗಳನ್ನು ಕರೆದು ಎಚ್ಚರಿಕೆ ನೀಡಲಾಗುವುದು. ಶ್ರೀಧರ್ ಎಪಿಎಂಸಿ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net