

ಬೀದರ್: ಜೈ ಭಾರತ ಮಾತಾ ಸೇವಾ ಸಮಿತಿ ತೆಲಂಗಾಣ ರಾಜ್ಯ ಘಟಕದ ಕಚೇರಿ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ. 30 ರಂದು ( ಶನಿವಾರ) ಬೆಳಗ್ಗೆ 10ಕ್ಕೆ ಹೈದಾರಾಬಾದ್ ಮಿಯಾಪುರ ಹತ್ತಿರದ ನರೇನ್ ಗಾರ್ಡನ್ ನಲ್ಲಿ ನಡೆಯಲಿದೆ. ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜ (ನಿರಗುಡಿ ಮುತ್ತ್ಯಾ) ಅವರ ಸಾನ್ನಿಧ್ಯದಲ್ಲಿ ಅಂದು ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಕಾರ್ಯಕ್ರಮ ನಡೆಯಲಿವೆ. ಸಹಸ್ರಾರು ಜನರು ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ರಾಷ್ಟ್ರೀಯ ವಕ್ತಾರ ವೈಜಿನಾಥ ಎಸ್.ಝಳಕಿ ಕಲಬುರಗಿ ತಿಳಿಸಿದ್ದಾರೆ.
ಸಮಿತಿ ತೆಲಂಗಾಣ ಘಟಕಕ್ಕೆ ಲದ್ದೆ ನಾಗರಾಜು ಅವರನ್ನು ಅಧ್ಯಕ್ಷರಾಗಿ ಪೂಜ್ಯರು ನೇಮಿಸಿದ್ದಾರೆ. ಅವರ ನೇತೃತ್ವದಲ್ಲಿ ಇಡೀ ತೆಲಂಗಾಣದಲ್ಲಿ ಸಮಿತಿ ಶಾಖೆ ರಚನೆ ಜತೆಗೆ ಸದಸ್ಯತ್ವ ಅಭಿಯಾನವೂ ಆರಂಭವಾಗುತ್ತಿದೆ. ಕಾರ್ಯಕ್ರಮದಲ್ಲಿ ಸ್ವಾತಂತ್ರೃ ಹೋರಾಟಗಾರರು, ಸೈನಿಕರು, ಮಾಜಿ ಸೈನಿಕರು, ಹಿರಿಯ ನಾಗರಿಕರು, ಪ್ರಗತಿಪರ ರೈತರು, ದೇಶ ಹಾಗೂ ಸಮಾಜ ಸೇವೆಯಲ್ಲಿ ತೊಡಗಿದವರಿಗೆ ಗೌರವ ಸನ್ಮಾನ ನಡೆಯಲಿದೆ. ಈ ವೇಳೆ ದೇಶಭಕ್ತಿ ಬಿಂಬಿಸುವ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಬೀದರ್, ಕಲಬುರಗಿ, ಯಾದಗಿರಿ ಸೇರಿದಂತೆ ಈ ಭಾಗದ ಹೆಚ್ಚಿನ ಜನರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.