ತೆಲಂಗಾಣಕ್ಕಲ್ಲ ಕರ್ನಾಟಕದ ಪ್ರತ್ಯೇಕ ರಾಜ್ಯದ ಭಾಗ ರಾಯಚೂರು

IMG-20220819-WA0014
Published on

ಕಲಬುರಗಿ: ರಾಯಚೂರನ್ನು ತೆಲಂಗಾಣದಲ್ಲಿ ವಿಲೀನ ಮಾಡಲು ಅಲ್ಲಿಯ ಜನ ಬಯಸಿದ್ದಾರೆ ಎಂದು ಹೇಳಿರುವ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಅವರ ಹೇಳಿಕೆ ತೀವ್ರವಾಗಿ ಖಂಡಿಸುತ್ತೇವೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅದ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಹೇಳಿದರು.

ವಿಪಕ್ಷದ ರಾಜಕಾರಣಿಗಳು, ಜನ ಪ್ರತಿನಿಧಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಆಡಳಿತ ಪಕ್ಷದ ಶಾಸಕರು, ಬಿಜೆಪಿ ಮುಖಂಡರಿಗೆ ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ ಹೇಳಿಕೆ ಮತ್ತು ತಮ್ಮದೇ ಪಕ್ಷದ ಶಾಸಕ ಡಾ.ಶಿವರಾಜ ಪಾಟೀಲ್ ಅವರ ಹೇಳಿಕೆ ವರಿಷ್ಠರಿಗೆ ಕೇಳಿಸಿಲ್ಲವೇ? ಇಲ್ಲ ಜಾಣ ಕಿವುಡುತನ ಪ್ರದರ್ಶಿಸುತ್ತಿದ್ದಾರೆಯೇ? ಎಂದು ಶುಕ್ರವಾರ ಪ್ರಶ್ನಿಸಿದರು.

ಬಿಜೆಪಿ ಶಾಸಕ ರಾಯಚೂರು ತೆಲಂಗಾಣಕ್ಕೆ ಸೇರಿಸಿ ಅನ್ನುವುದು ಕೆಸಿಆರ್ ರಾಯಚೂರು ಜನರು ತೆಲಂಗಾಣ ಸೇರಲು ಬಯಸಿದ್ದಾರೆ ಎಂದು ಹೇಳುವುದು ನೋಡಿದರೆ ಎನೋ ಕುತಂತ್ರ ಅಡಗಿರುವ ಅನುಮಾನ ಮೂಡುತ್ತಿದೆ ಎಂದರು.

ಕೆಸಿಆರ್ ಹೇಳಿಕೆ ಖಂಡಿಸಿದ ಶಾಸಕ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಧನ್ಯವಾದಗಳು. ಆದರೆ ಇನ್ನುಳಿದ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಶಾಸಕರು, ಸಂಸದರು, ಜನಪ್ರತಿನಿಧಿಗಳಿಗೆ ಏನಾಗಿದೆ. ಅವರಿಗೆ ರಾಯಚೂರಿನ ಬಗ್ಗೆ ಕಾಳಜಿ ಇಲ್ಲವೇ? ಬೆಳಗಾವಿ ವಿಷಯದಲ್ಲಿ ಸಣ್ಣ ಹೇಳಿಕೆಗೂ ಕರ್ನಾಟಕ ಬಂದ್ ಎನ್ನುವ ಹೋರಾಟಗಾರರು ಮೌನ ವಹಿಸಿದ್ದಾರೆ ಏಕೆ?

ರಾಯಚರೂರು ಕಲ್ಯಾಣ ಕರ್ನಾಟಕದ ಅವಿಭಾಜ್ಯ ಅಂಗ, ರಾಯಚೂರು ತೆಲಂಗಾಣದಲ್ಲಿ ವಿಲೀನಗೊಳಿಸಲು ಬಿಡುವುದಿಲ್ಲ. ಕೆಸಿಆರ್ ಹೇಳಿಕೆ ಕುರಿತು ಆಡಳಿತಾರೂಡ ಪಕ್ಷದ ಮುಖ್ಯಮಂತ್ರಿ ಮುಖಂಡರು, ಜನಪ್ರತಿನಿಧಿಗಳು, ಮೌನ ಮುರಿಯಬೇಕು. ತೆಲಂಗಾಣ ಮುಖ್ಯಮಂತ್ರಿ ಹೇಳಿಕೆ ಹಿಂಪಡೆಯಲು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ಈ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿದರೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ನೀಡಬೇಕು. ತೆಲಂಗಾಣಕ್ಕೆ ಸೇರ್ಪಡೆಯ ಮಾತೇ ಬರಬಾರದು ಎಂದರು.

ಪ್ರಸಾದ ಜೋಶಿ, ಶ್ರೀದೇವಿ ಕಾಲೆಬಾಗ, ಅನೀಲ ಪವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net