

ಬೇಲೂರು: ತೆರೆಮರೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವವರನ್ನು ಗುರುತಿಸಿ ಸನ್ಮಾನಿಸುವುದು ಮಾದರಿ ಕಾರ್ಯ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಆಯೋಜಿಸಿದ್ದ ತಿಂಗಳ ವ್ಯಕ್ತಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕೆಲವರು ಸೇವೆ ಎಂಬ ಹೆಸರನ್ನು ಸ್ವಾರ್ಥಕ್ಕೆ ಬಳಸುವುದು ಹೆಚ್ಚಾಗಿದೆ. ಆದರೆ ಯಾವುದೇ ಪ್ರಚಾರ ಮತ್ತು ಸ್ವಾರ್ಥ ಬಯಸದೇ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ ಸಮಾಜಮುಖಿ ಚಟುವಟಿಕೆ ಮಾಡುತ್ತಿರುವ ನಿಸ್ವಾರ್ಥ ಗೆಳೆಯರ ಬಳಗದ ಮುಖ್ಯಸ್ಥ ಬಿ.ಸಿ..ಹೇಮಂತ ಮಾದರಿ ಯುವಕರಾಗಿದ್ದಾರೆಂದು ಅವರು ಶ್ಲಾಘಿಸಿದರು.
ಪತ್ರಕರ್ತರ ಸಂಘ ಇಂಥ ಯುವಕರನ್ನು ಗುರುತಿಸಿ ತಿಂಗಳ ವ್ಯಕ್ತಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸುತ್ತಿರುವುದು ಮತ್ತಷ್ಟು ಸೇವಾ ಕಾರ್ಯಕ್ಕೆ ಪ್ರೇರಣೆಯಾಗಲಿದೆ ಎಂದರು. ಪತ್ರಕರ್ತರ ಸಂಘದ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಪೈಂಟ್ ರವಿ, ಉಪಾಧ್ಯಕ್ಷ ಬಿ.ಬಿ.ಶಿವರಾಜ್, ಹಿರಿಯ ಪತ್ರಕರ್ತ ಹಳೇಬೀಡು ಗೋವಿಂದಪ್ಪ, ಉಪಾಧ್ಯಕ್ಷ ರಾಘವೇಂದ್ರ ಹೊಳ್ಳ, ಕಾರ್ಯದರ್ಶಿ ಬಿ.ಎಲ್.ಲಕ್ಷ್ಮಣ್ ಇತರರಿದ್ದರು.