ತೆರೆ ಮಹೋತ್ಸವ ಸಂಪನ್ನ

18sunti01
ತೆರೆ ಮಹೋತ್ಸವದಲ್ಲಿ ಚಾಮುಂಡೇಶ್ವರಿ, ಮುತ್ತಪ್ಪ, ಪರಿವಾರ ದೇವರುಗಳ ಕೋಲಗಳು
Published on

ಸುಂಟಿಕೊಪ್ಪ: ಚಾಮುಂಡೇಶ್ವರಿ, ಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವ ಸೋಮವಾರ ಸಂಪನ್ನಗೊಂಡಿತು.

ಧ್ವಜಾರೋಹಣದೊಂದಿಗೆ ಮಹೋತ್ಸವ ಆರಂಭಗೊಂಡಿದ್ದು, ವಿವಿಧ ಕೋಲಗಳು ಸೇರಿದಂತೆ ಪೂಜಾ ವಿಧಿ ವಿಧಾನಗಳು ನೆರವೇರಿದವು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಬಾವುಟ ಇಳಿಸುವುದರೊಂದಿಗೆ ದೇವರ ಕಾರ್ಯ ಸಂಪನ್ನಗೊಂಡಿತು.

ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯವನ್ನು ಬಣ್ಣಬಣ್ಣದ ವಿದ್ಯುತ್ ದೀಪ, ಹೂ, ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಭಾನುವಾರ ರಾತ್ರಿ ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆ, ಹೊಸಕೋಟೆ, ಗರಗಂದೂರು, ಮಾದಾಪುರ, ಚೆಟ್ಟಳ್ಳಿ, ಭೂತನ ಕಾಡು, ಕೆದಕಲ್ ಹಾಗೂ ಬಾಳೆಕಾಡು ಭಾಗಗಳಿಂದ ಭಕ್ತರು ಆಗಮಿಸಿದ್ದರು.
ದೇವಸ್ಥಾನದ ಅರ್ಚಕರಾದ ಮಂಜುನಾಥ ಉಡುಪ ಹಾಗೂ ಪೂಜಾರಿ ಶಿವರಾಂ ನೇತೃತ್ವದಲ್ಲಿ ಗಣಪತಿ ಹವನ, ಶುದ್ಧಿ ಪುಣ್ಯಾಹ, ನೆರವೇರಿತು. ಬಳಿಕ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ಮುತ್ತಪ್ಪ ವೆಳ್ಳಾಟಂ, ಚಂಡೆಮೇಳ, ವಾದ್ಯಮೇಳ, ಶ್ರೀಶಾಸ್ತಪ್ಪನ ವೆಳಾಳಟಂ, ಗುಳಿಗನ ವೆಳ್ಳಾಟಂ ನೆರವೇರಿತು. ಮಹಿಳೆಯರು ಮತ್ತು ಮಕ್ಕಳು ತಲಾ ದೀಪವನ್ನು ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು.

ಬಾಳೆಕಾಡುವಿನ ಶ್ರೀ ಮುತ್ತಪ್ಪ ಸೇವಾ ಸಮಿತಿಯಿಂದ ಮುತ್ತಪ್ಪ ದೇವರನ್ನು ಪ್ರತಿಷ್ಠಾಪಿಸಲಾಗಿತ್ತು. ಮಹಿಳೆಯರು ದೇವರ ಕಲಾಕೃತಿಯ ಬಿಂಬವನ್ನು ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೂರು ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.

ದೇವಸ್ಥಾನ ಸಮಿತಿ ಕಾರ್ಯದರ್ಶಿ ಶಶಿಕಾಂತರೈ, ಖಜಾಂಚಿ ಎಸ್.ಜಿ.ಶ್ರೀನಿವಾಸ್, ಕೆ.ಪಿ.ಜಗನ್ನಾಥ್, ಎ.ಶ್ರೀಧರ್ ಕುಮಾರ್, ಸುರೇಶ್ ಗೋಪಿ, ಎ.ಶ್ರೀಧರನ್, ಧನುಕಾವೇರಪ್ಪ, ಪೃಥ್ವಿರಾಜ್, ಸುರೇಶ್ ಚಂದು, ದಿನು ದೇವಯ್ಯ, ರಮೇಶ್ ಪಿಳ್ಳೆ, ವಿ.ಎ.ಸಂತೋಷ್‌ಕುಮಾರ್, ವಿನೋದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net