ಬಳ್ಳಾರಿ ; ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಳ್ಳಬಾರದು. ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟಕ್ಕೆ ಕನ್ನಡಿಗರೆಲ್ಲರೂ ಕೈಜೋಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಸಂಡೂರಿನ ವಿಶ್ವಾಸ್ ಯು. ಲಾಡ್ ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಜಿಪಂ ವತಿಯಿಂದ ಸೋಮವಾರ ನಡೆದ ಸಾಧನಾ ಸಮಾವೇಶ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಿಂದ ಪ್ರತಿವರ್ಷ ಕೇಂದ್ರ ಸರ್ಕಾರಕ್ಕೆ ಸುಮಾರು ನಾಲ್ಕು ಲಕ್ಷ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಸಂದಾಯವಾಗುತ್ತದೆ. ಇದು ಪ್ರತಿಯೊಬ್ಬ ಕನ್ನಡಿಗನ ಬೆವರಿನ ಗಳಿಕೆ. ಆದರೆ, ಕೇಂದ್ರ ಸರ್ಕಾರ ನೀಡುತ್ತಿರುವ ತೆರಿಗೆ ಪಾಲು ಅಂದಾಜು 60 ಸಾವಿರ ಕೋಟಿ ರೂ. ಮಾತ್ರ. ನಾವು ಕೊಡುವ ಒಂದು ರೂಪಾಯಿ ತೆರಿಗೆಗೆ ವಾಪಸು ಸಿಗುತ್ತಿರುವುದು ಕೇವಲ 15 ಪೈಸೆ. ಈ ಅನ್ಯಾಯದ ವಿರುದ್ಧ ಕನ್ನಡಿಗರೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ. ಕೇಂದ್ರದ ಎನ್‌ಡಿಎ ಸರ್ಕಾರ ಇತ್ತೀಚೆಗೆ ದೇಶದ 28 ರಾಜ್ಯಗಳಿಗೆ ಒಟ್ಟು 1,78,193 ಕೋಟಿ ಬಿಡುಗಡೆಗೊಳಿಸಿದೆ. ಇದರಲ್ಲಿ ಕರ್ನಾಟಕಕ್ಕೆ ನೀಡಿರುವುದು ಕೇವಲ 6,498 ಕೋಟಿ ರೂ. ಇದರಲ್ಲಿ ಬಿಜೆಪಿ ಆಡಳಿತ ಇರುವ ರಾಜ್ಯಗಳಾದ ಉತ್ತರಪ್ರದೇಶಕ್ಕೆ 31,962 ಕೋಟಿ ರೂ., ಬಿಹಾರಕ್ಕೆ 17,921 ಕೋಟಿ ರೂ., ಮಧ್ಯಪ್ರದೇಶಕ್ಕೆ 13,987 ಕೋಟಿ ರೂ. ಮತ್ತು ರಾಜಸ್ಥಾನಕ್ಕೆ 10,737 ಕೋಟಿ ರೂ. ಯಷ್ಟು ತೆರಿಗೆ ಪಾಲನ್ನು ನೀಡಲಾಗಿದೆ. ಇದು ನ್ಯಾಯವೇ ಎಂದು ಪ್ರಶ್ನಿಸಿದರು. ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಉತ್ತರಪ್ರದೇಶಕ್ಕೆ ಶೇ.17.93, ಬಿಹಾರಕ್ಕೆ 10.05, ರಾಜಸ್ತಾನಕ್ಕೆ 6. 02 ಮತ್ತು ಮಧ್ಯಪ್ರದೇಶಕ್ಕೆ 7.85ರಷ್ಟು ಪಾಲು ನೀಡಿದರೆ, ಕರ್ನಾಟಕಕ್ಕೆ ನೀಡುತ್ತಿರುವ ತೆರಿಗೆ ಪಾಲು ಕೇವಲ ಶೇ. 3.64 ಮಾತ್ರ. ತೆರಿಗೆ ಹಂಚಿಕೆಗಾಗಿ ನಿಗದಿ ಪಡಿಸಲಾಗಿರುವ ಮಾನದಂಡದಲ್ಲಿಯೇ ಕೇಂದ್ರ ಸರ್ಕಾರದ ಪ್ರಗತಿ ವಿರೋಧಿ ಧೋರಣೆ ಸ್ಪಷ್ಟವಾಗಿದೆ ಎಂದು ಅಂಕಿಅಂಶ ಸಹಿತ ಮಾಹಿತಿ ನೀಡಿದರು. ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಸೇರಿರುವ 19 ಸಂಸದರಿದ್ದಾರೆ, ಒಂದು ದಿನವಾದರೂ ಲೋಕಸಭೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಸ್ತಾಪಿಸಿದ್ದಾರೆಯೇ ಎಂದು ಕಿಡಿಕಾರಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಜಯೇಂದ್ರ ಮೊದಲಾದ ನಾಯಕರು ಏನು ಹೇಳುತ್ತಾರೆ? ತೆರಿಗೆ ಕಟ್ಟುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆದರೆ ಕೇಂದ್ರದಿಂದ ನಮ್ಮ ಪಾಲು ವಾಪಾಸ್ ಪಡೆಯುವುದರಲ್ಲಿ ಕೊನೆ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿರುದ್ಧ ಷಡ್ಯಂತ್ರ, ಪಿತೂರಿ ನಡೆಸುತ್ತಿರುವ ಬಿಜೆಪಿಯನ್ನು ಉಪ ಚುನಾವಣೆಯಲ್ಲಿ ಸೋಲಿಸಿ ತಕ್ಕ ಪಾಠ ಕಲಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯನ್ನು ಗೆಲ್ಲಿಸಿ, ಶ್ರೀರಾಮುಲು ಅವರನ್ನು ಸೋಲಿಸಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಗೌರವ ಬಂದಿದೆ. ಅದರಂತೆ, ಸಂಡೂರಿನಲ್ಲಿ ನಡೆಯುವ ವಿಧಾನಸಭಾ ಉಪ ಚುನಾವಣೆಯಲ್ಲಿ ಮಾಜಿ ಸಚಿವರಾದ ಜನಾರ್ದನರೆಡ್ಡಿ, ಶ್ರೀರಾಮುಲು ಸೇರಿ ಯಾರೇ ಬಿಜೆಪಿ ಜವಾಬ್ದಾರಿ ವಹಿಸಿಕೊಳ್ಳಲಿ. ಆದರೆ, ಈ ಕ್ಷೇತ್ರದ ಜನರು ಮಾತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಬೇಕು ಎಂದರು. ಮುಡಾ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಬಿಜೆಪಿ ಅವರು ಸುಳ್ಳು ಆರೋಪಿಸಿ ರಾಜೀನಾಮೆ ಕೇಳುತ್ತಿದ್ದಾರೆ ಎಂದರು. ಸಂಸದ ಈ. ತುಕಾರಾಮ್ ಈ ಬಾರಿ ಶಾಸಕರಾದ ಬಳಿಕ 1200 ಕೋಟಿ ಅನುದಾನವನ್ನು ಸಂಡೂರು ಜನತೆಗಾಗೆ ತಂದಿದ್ದಾರೆ. ಅಭಿವೃದ್ಧಿ ಎಂದರೆ ಈ. ತುಕಾರಾಮ್, ತುಕಾರಾಮ್ ಎಂದರೆ ಅಭಿವೃದ್ಧಿ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಡಿಸಿಎಂ ಡಿಕೆ ಶಿವಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಗಣಿಗಾರಿಕೆ ಮೂಲಕ ಲೂಟಿ ಮಾಡಿದವರ ವಿರುದ್ಧ ಈ ಹಿಂದೆ ಪಾದಯಾತ್ರೆ ಮಾಡಿತ್ತು. ಈಗ ಕೆಲವರು ಮತ್ತೆ ಬಂದಿದ್ದಾರೆ. ಆದರೆ ಜನತೆ ಆತಂಕ ಪಡುವ ಅವಶ್ಯಕತೆಯಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರದ ಎಲ್ಲ ಸಚಿವರು ಬಂದು ಶಕ್ತಿಯಾಗಿ ನಿಲ್ಲುತ್ತೇವೆ ಎಂದು ಪರೋಕ್ಷವಾಗಿ ಜನಾರ್ದನರೆಡ್ಡಿ ಟಾಂಗ್ ನೀಡಿದರು. ಬಿಜೆಪಿ ಕೇವಲ ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ದೇವರು, ಧರ್ಮವನ್ನು ಗೌರವಿಸುತ್ತೇವೆ. ಸರ್ವರಿಗೂ ಸಮಬಾಳು, ಸಮಪಾಲು ತತ್ವದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ. ಮುಂದಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ ಬಿಜೆಪಿ ಯಡಿಯೂರಪ್ಪ, ಬೊಮ್ಮಯಿ ಹಾಗೂ ಇತರ ಬಿಜೆಪಿ ನಾಯಕರ ಬಡವರ ಕಾಳಜಿ ವಹಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಸಚಿವರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್, ಸಂತೋಷ ಲಾಡ್ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಸಂಡೂರಿನ ನಾರಿಹಳ್ಳ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದರು. ಬಳಿಕ ಕ್ಷೇತ್ರದ ನೂರರು ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದರು.