ತೆರಿಗೆ ಸಂಗ್ರಹಿಸಿ ಹೊರಬಡಾವಣೆಗಳ ಅಭಿವೃದ್ಧಿ ಅನಿವಾರ್ಯ: ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ

2
Published on

ಮೈಸೂರು: ಹೊಸ ಬಡಾವಣೆಗಳ ನಿವಾಸಿಗಳಿಂದಲೇ ಕಂದಾಯ ಸಂಗ್ರಹಿಸಿ ಹೊರಬಡಾವಣೆಗಳನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಬೋಗಾದಿ ಪಟ್ಟಣ ಪಂಚಾಯಿತಿ ಕಚೇರಿಗೆ ಸೋಮವಾರ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
ನಗರದ ಹೊರ ವಲಯದಲ್ಲಿರುವ ಬಡಾವಣೆಗಳಲ್ಲಿ ಕನಿಷ್ಠ ಸೌಲಭ್ಯ ಕಲ್ಪಿಸಲು 2 ಸಾವಿರ ಕೋಟಿ ರೂ. ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಷ್ಟೊಂದು ಹಣ ಸರ್ಕಾರದಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಬಡಾವಣೆ ಆಸ್ತಿಯನ್ನು ನೋಂದಣಿ ಮಾಡಿಸುವ ಮೂಲಕ ನಿವಾಸಿಗಳಿಂದಲೇ ಕಂದಾಯ ಸಂಗ್ರಹಿಸಿ ಅಭಿವೃದ್ಧಿಸುಡಿಸುವುದು ಅನಿವಾರ್ಯವಾಗಿದೆ ಎಂದರು.
ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ 275 ಖಾಸಗಿ ಬಡಾವಣೆಗಳಿದ್ದು, ಅರ್ಧಕ್ಕೂ ಹೆಚ್ಚು ಬಡಾವಣೆಗಳಲ್ಲಿ ಮೂಲಸೌಲಭ್ಯವೇ ಇಲ್ಲ. ಬಡಾವಣೆಗಳನ್ನು ಹಸ್ತಾಂತರ ಮಾಡುವಾಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಪರಿಶೀಲಿಸಿ, ಬಳಿಕ ನಿರಾಪೇಕ್ಷಣಾ ಪತ್ರ (ಎನ್‌ಒಸಿ) ನೀಡುವ ಬದಲು ಇದ್ದ ಸ್ಥಿತಿಯಲ್ಲಿಯೇ ಹಸ್ತಾಂತರ ಮಾಡಿಕೊಂಡಿರುವುದು ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೋಗಾದಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಬಡಾವಣೆಗಳಾದ ಎಸ್‌ಬಿಎಂ ಲೇಔಟ್, ಆಶ್ರಯ ಬಡಾವಣೆ, ಬೋಗಾದಿ, ಹಳ್ಳಿಬೋಗಾದಿ ಮೊದಲಾದ ಬಡಾವಣೆಗಳಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕಿದೆ. ಹಾಗಾಗಿ ಈ ಬಡಾವಣೆಗಳ ನಿವಾಸಿಗಳಿಗೆ ಖಾತೆ ಮಾಡಿಕೊಟ್ಟು ಕಂದಾಯ ಸಂಗ್ರಹಿಸಿ, ಅದರಿಂದ ಬರುವ ಆದಾಯದಿಂದ ಅಭಿವೃದ್ಧಿ ಕಾರ್ಯ ಮಾಡುವುದೇ ಈಗ ಉಳಿದಿರುವ ಪರಿಹಾರ ಮಾರ್ಗವಾಗಿದೆ ಎಂದು ತಿಳಿಸಿದರು.
ಮೂಲಸೌಕರ್ಯ ಕಲ್ಪಿಸುವಂತೆ ಸರ್ಕಾರ, ಜಿಲ್ಲಾಡಳಿತ, ಮುಡಾಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿಗಳು ಜಿಲ್ಲೆಯವರೇ ಆಗಿರುವ ಕಾರಣ ಮತ್ತೊಮ್ಮೆ ಮನವಿ ಮಾಡಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಡ ತರಲಾಗುವುದು. ಅಲ್ಲದೆ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಡಾವಣೆಗಳ ಆಸ್ತಿ ಖಾತೆ ಮಾಡಲು ಸುತ್ತೋಲೆ ಹೊರಡಿಸುವಂತೆ ಕೋರಲಾಗುವುದು ಎಂದು ಹೇಳಿದರು.
ಶಾಸಕರ ಮನವಿಗೆ ಸ್ಪಂದನೆ ಇಲ್ಲ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಅನುಭವವುಳ್ಳ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ನಗರಾಭಿವೃದ್ಧಿ ಸಚಿವರು, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ. ಆದರೆ ಈ ಸರ್ಕಾರದಲ್ಲಿ ಶಾಸಕರ ಮನವಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಬೇಸರ ಹೊರ ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಸಂಪೂರ್ಣ ಮಾಹಿತಿ ಇದೆ. ಬೆಂಗಳೂರಿನಲ್ಲಿ ಕಂದಾಯ ಜಮೀನಿಗೆ ಖಾತೆ ಮಾಡಿಕೊಡಲಾಗುತ್ತದೆ. ಅದೇ ರೀತಿ ಇಲ್ಲಿಯೂ ಖಾತೆ ಮಾಡಿಕೊಡಲು ಸರ್ಕಾರದಿಂದ ಆದೇಶ ಹೊರಡಿಸಿದರೆ ಅನುಕೂಲವಾಗಲಿದೆ ಎಂದು ಇಂಗಿತ ವ್ಯಕ್ತಪಡಿಸಿದರು.
ಕುಡಿಯುವ ನೀರು, ವಿದ್ಯುತ್ ದೀಪ, ಕಸ ಸಂಗ್ರಹ, ರಸ್ತೆ ಇನ್ನಿತರ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ಮುಖ್ಯಾಧಿಕಾರಿ ಜಗರೆಡ್ಡಿ, ಕಂದಾಯ ನಿರೀಕ್ಷಕ ಹರ್ಷಕುಮಾರ್ ಇತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net