ತೆರಿಗೆ ವಸೂಲಿ ಮಾಡದ ಅಧಿಕಾರಿಗಳಿಗೆ ನೊಟೀಸ್

Published on

ಪಾಂಡವಪುರ: ತಾಲೂಕು ಪಂಚಾಯಿತಿ ನಿರ್ವಾಹಕ ಅಧಿಕಾರಿ, ಹೇಮಾವತಿ ಎಡದಂಡೆ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್, ಉಪವಿಭಾಗೀಯ ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ವಿ.ಸಿ ನಾಲಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್ ತಿಳಿಸಿದರು.

ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳು ಕಂದಾಯ ಬಾಕಿ ಉಳಿಸಿಕೊಂಡಿರುವ ಬಗ್ಗೆ ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿ ಸಂಬಂಧಪಟ್ಟ ಇಲಾಖೆಗಳಿಂದ ತೆರಿಗೆ ವಸೂಲಿಗೆ ಕ್ರಮ ವಹಿಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪಟ್ಟಣ ವ್ಯಾಪ್ತಿಯಲ್ಲಿರುವ ತಾಲೂಕು ಪಂಚಾಯಿತಿ ವಸತಿ ಗೃಹಗಳ 2012-13ರಿಂದ 2024-25ರವರೆಗೆ 8.43 ಲಕ್ಷ ರೂ., ಹೇಮಾವತಿ ಎಡದಂಡೆ ನಾಲಾ ವಿಭಾಗದ ವಸತಿ ಗೃಹಗಳ 3.50 ಲಕ್ಷ ರೂ., ಉಪವಿಭಾಗೀಯ ಆಸ್ಪತ್ರೆಯ 1.14 ಲಕ್ಷ ರೂ. ಹಾಗೂ ವಿ.ಸಿ.ಉಪವಿಭಾಗದ ವಸತಿ ಗೃಹಗಳ 8.16 ಲಕ್ಷ ರೂ. ಕಂದಾಯ ಬಾಕಿ ಉಳಿದಿದೆ. ಸರ್ಕಾರ ಕೂಡ ತೆರಿಗೆ ಪಾವತಿಯಲ್ಲಿ ಪ್ರಗತಿ ಸಾಧಿಸದಿದ್ದರೆ 15ನೇ ಹಣಕಾಸು ಆಯೋಗದ ಅನುದಾನ ಕಡಿತಗೊಳಿಸಲಾಗುವುದು ಎಂದು ನಿರ್ದೇಶನ ನೀಡಿದೆ. ಅದರಂತೆ ಕಂದಾಯ ವಸೂಲಾತಿ ಮಾಡಬೇಕಾಗಿದ್ದು, ವಿವಿಧ ಇಲಾಖೆಗಳು ಸುಮಾರು 24 ಲಕ್ಷ ರೂ.ಗೂ ಅಧಿಕ ಕಂದಾಯ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೂರು ದಿವಸದೊಳಗೆ ಕಂದಾಯ ಪಾವತಿಸುವಂತೆ ಇಲಾಖೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ನೋಟಿಸ್ ಜಾರಿಗೊಳಿಸಿದ ಮೂರು ದಿನದೊಳಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳು ತೆರಿಗೆ ಪಾವತಿಗೆ ಕ್ರಮ ವಹಿಸಬೇಕು. ತಪ್ಪಿದಲ್ಲಿ 1964 ಪುರಸಭೆ ನಿಯಮಾವಳಿಗಳ ಪ್ರಕಾರ ಎರಡು ಪಟ್ಟು ಕಂದಾಯ ವಸೂಲಿ ಮಾಡಲು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net