ತೆರಿಗೆ ವಸೂಲಾತಿಗೆ ಕ್ರಮವಹಿಸಿ

Published on

ಹನೂರು: ಹದಿನೈದನೇ ಹಣಕಾಸು ಯೋಜನೆಯ ಅನುದಾನದ ಖರ್ಚಿನ ಬಗ್ಗೆ ಸಮರ್ಪಕ ವರದಿ ನೀಡುವುದರ ಜತೆಗೆ ಗ್ರಾಮಗಳಲ್ಲಿ ತೆರಿಗೆ ವಸೂಲಾತಿಗೆ ಮುತುವರ್ಜಿ ವಹಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಉಮೇಶ್ ತಿಳಿಸಿದರು.

15ನೇ ಹಣಕಾಸು ಹಾಗೂ ತೆರಿಗೆ ವಸೂಲಾತಿ ಸಂಬಂಧ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಗ್ರಾಪಂ 15ನೇ ಹಣಕಾಸಿನ ಯೋಜನೆಯಡಿ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಕೆಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ವೆಚ್ಚದ ಬಗ್ಗೆ ವರದಿ ಸಲ್ಲಿಸಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡಲೇ ಕ್ರಮವಹಿಸಿ ಸಮರ್ಪಕ ವರದಿ ನೀಡಬೇಕು. ಇದರಲ್ಲಿ ನಿರ್ಲಕ್ಷೃ ಸಲ್ಲದು. ಬಹುತೇಕ ಗ್ರಾಪಂಗಳಲ್ಲಿ ತೆರಿಗೆ ವಸೂಲಾತಿ ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ ಗ್ರಾಪಂಗೆ ಬರಬೇಕಾದ ಆದಾಯ ಸಂದಾಯವಾಗುತ್ತಿಲ್ಲ. ಈ ಬಗ್ಗೆ ಮುತುವರ್ಜಿ ವಹಿಸಿ ಬಿಲ್‌ಕಲೆಕ್ಟರ್‌ಗಳನ್ನು ನಿತ್ಯ ಗ್ರಾಮಗಳಿಗೆ ಕಳುಹಿಸಿ ತೆರಿಗೆ ವಸೂಲಾತಿಗೆ ಅಗತ್ಯ ಕ್ರಮವಹಿಸಬೇಕು. ನಿತ್ಯ ವಸೂಲಾದ ತೆರಿಗೆಯನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಇದೇ ವೇಳೆ ತಾಲೂಕಿನಲ್ಲಿ ಮಳೆಯಾಗದ ಪರಿಣಾಮ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಆದ್ದರಿಂದ ಪ್ರತಿಯೊಬ್ಬರೂ ನಿತ್ಯ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಇರುವ ಸಂಪನ್ಮೂಲವನ್ನು ಬಳಸಿಕೊಂಡು ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದು ಇಒ ಸೂಚಿಸಿದರು. ಪಿಡಿಒಗಳಾದ ಮಾದೇಶ್, ಸುರೇಶ್, ಬಾಲಗಂಗಾಧರ, ಪುಷ್ಪಲತಾ, ಮಹದೇವಪ್ರಭು, ಕಾರ್ಯದರ್ಶಿ ನಾಗರಾಜಮೂರ್ತಿ ಇನ್ನಿತರರಿದ್ದರು.

ಉದ್ಯೋಗ ನೀಡಲು ಸೂಚನೆ

‘ವಿಜಯವಾಣಿ’ ಪತ್ರಿಕೆಯ ಮಂಗಳವಾರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ‘ನರೇಗಾಗೆ ಅಡ್ಡಿ, ಗುಳೇ ಹೋಗಲು ರೆಡಿ’ ವರದಿ ಪ್ರಕಟಗೊಂಡಿದ್ದನ್ನು ಸಭೆಯಲ್ಲಿ ಗಮನಕ್ಕೆ ತಂದ ಇಒ ಉಮೇಶ್ ಅವರು, ಆಲಂಬಾಡಿ ಗ್ರಾಮದ ಜನರಿಗೆ ಕೂಡಲೇ ನರೇಗಾ ಯೋಜನೆಯಡಿ ಉದ್ಯೋಗ ನೀಡಲು ಅಗತ್ಯ ಕ್ರಮವಹಿಸುವಂತೆ ಗೋಪಿನಾಥಂ ಗ್ರಾಪಂನ ಪಿಡಿಒ ರಾಜ್‌ಕುಮಾರ್‌ಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net