

ಸಾಗರ: ಕೃಷಿ ಭೂಮಿ ಖರೀದಿಗೆ ಮುಕ್ತ ಅವಕಾಶ ನೀಡುವ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜನಸಂಗ್ರಾಮ ಪರಿಷತ್, ಸ್ವರಾಜ್ ಇಂಡಿಯಾ, ಡಿಎಸ್ಎಸ್, ರೈತ ಸಂಘ, ಸ್ವರಾಜ್ ಅಭಿಯಾನ ಸಂಘಟನೆಗಳು ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದವು.
ಜನಸಂಗ್ರಾಮ ಪರಿಷತ್ನ ವಾಮದೇವ ಗೌಡ ಮಾತನಾಡಿ, ರಾಜ್ಯ ಸರ್ಕಾರ ಕೃಷಿಭೂಮಿಯನ್ನು ಯಾರು ಬೇಕಾದರೂ ಖರೀದಿಸಬಹುದೆಂಬ ಕಾಯ್ದೆ ತರುವ ಹಿಂದೆ ಭ್ರಷ್ಟಾಚಾರದ ಉದ್ದೇಶವಿದೆ. ಅಧಿಕಾರ ಶಾಹಿಗಳು, ಬಹು ರಾಷ್ಟ್ರೀಯ ಕಂಪನಿಗಳು, ಅಕ್ರಮವಾಗಿ ಹಣ ಸಂಪಾದನೆ ಮಾಡಿರುವವರು ತೆರಿಗೆ ವಂಚಿಸಲು ಕಾಯ್ದೆ ರಹದಾರಿ ಕಲ್ಪಿಸುತ್ತದೆ ಎಂದು ದೂರಿದರು.
ರಾಜ್ಯ ಸರ್ಕಾರ ಕಾಯ್ದೆ ತಿದ್ದುಪಡಿ ವಿಷಯವನ್ನು ವಿಧಾನಸಭೆಯಲ್ಲಿ ರ್ಚಚಿಸಿದರೆ ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸುತ್ತಾರೆ. ಹೀಗಾಗಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿದೆ. ಇದು ಅತ್ಯಂತ ಕಠೋರ ಕಾಯ್ದೆ ತಿದ್ದುಪಡಿ. ಇದಕ್ಕೆ ಯಾವುದೇ ಕಾರಣಕ್ಕೂ ನಮ್ಮ ಸಂಘಟನೆಗಳು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.
ಸ್ವರಾಜ್ ಇಂಡಿಯಾ ಕರ್ನಾಟಕ ಶಿವಮೊಗ್ಗ ಘಟಕದ ಶಿವಾನಂದ ಕುಗ್ವೆ ಮಾತನಾಡಿ, ರಾಜ್ಯ ಸರ್ಕಾರ ಕಾಯ್ದೆ ಜಾರಿ ಹಿಂದೆ ರಿಯಲ್ ಎಸ್ಟೇಟ್ ದಂಧೆ ನಡೆಸುವವರ ಹಿತಾಸಕ್ತಿ ಅಡಗಿದೆ. ರಿಯಲ್ ಎಸ್ಟೇಟ್ ಭೂದಾಹಿಗಳ ಒತ್ತಡಕ್ಕೆ ಮಣಿದು ಸರ್ಕಾರ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ ಎಂದು ದೂರಿದರು.
ಪ್ರಮುಖರಾದ ಎಚ್.ಬಿ.ರಾಘವೇಂದ್ರ, ಅಖಿಲೇಶ್ ಚಿಪ್ಳಿ, ವಸಂತ ಕುಗ್ವೆ, ಎನ್.ಡಿ.ವಸಂತಕುಮಾರ್, ನಾಗರಾಜ್ ಇತರರಿದ್ದರು.