ತೆರಿಗೆ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಿ

GADAG DC SUNDARESH BAABU
Published on

ಗದಗ: ಗದಗ ಬೆಟಗೇರಿ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಅವಳಿ ನಗರದ ಎಲ್ಲ ಮುಖ್ಯ ರಸ್ತೆಗಳ ತೆರೆದ ಗುಂಡಿಗಳನ್ನು ತಕ್ಷಣವೇ ಮುಚ್ಚಲು ನಿರ್ದೇಶನ ನೀಡಿದರು.

ಬುಧವಾರ ನಗರಸಭೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನಗರಸಭೆಯ ಸಿಬ್ಬಂದಿ ಹಾಗೂ ಪೌರಕಾರ್ವಿುಕರಿಗೆ ನಿಗದಿತ ಅವಧಿಯಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಯಾವುದೇ ಬಾಕಿ ಉಳಿಸಿಕೊಳ್ಳದೆ 10 ದಿನಗಳೊಳಗಾಗಿ ನೀಡಬೇಕು. ನಗರಸಭೆಯ ತೆರಿಗೆಗೆ ಒಳಪಡುವ ಹಾಗೂ ತೆರಿಗೆಯಿಂದ ಹೊರಗುಳಿದ ಎಲ್ಲ ಆಸ್ತಿಗಳ ಸರ್ವೆ ಕಾರ್ಯ ನಡೆಸಿ ಬಾಕಿ ಉಳಿದಿರುವ ತೆರಿಗೆಯನ್ನು ವಸೂಲಿ ಮಾಡಲು 15 ದಿನಗಳ ಅವಧಿ ನಿಗದಿಪಡಿಸಿದರು.

ನಗರಸಭೆಯ ನಿರ್ವಹಣೆಗೆ ತೆರಿಗೆ ಮುಖ್ಯ ಆದಾಯವಾಗಿದ್ದು, ಮಳಿಗೆಗಳ ಬಾಡಿಗೆಯ ಬಾಕಿ ಮೊತ್ತ ಹಾಗೂ ಪ್ರಸಕ್ತ ಸಾಲಿನ ತೆರಿಗೆಯನ್ನು, ನೀರಿನ ಬಾಕಿ ತೆರಿಗೆ ಹಾಗೂ ಟ್ರೇಡ್ ಲೈಸನ್ಸ್​ಗೆ ಸಂಬಂಧಿಸಿದ ತೆರಿಗೆಗಳನ್ನು ಬರುವ ಅಗಸ್ಟ್ 15ರ ಒಳಗಾಗಿ ಪೂರ್ಣ ಪ್ರಮಾಣದಲ್ಲಿ ವಸೂಲಿ ಮಾಡಬೇಕು. ಈವರೆಗೂ ಟ್ರೇಡ್ ಲೈಸನ್ಸ್ ಪಡೆಯದ ವ್ಯಾಪಾರಸ್ಥರನ್ನು ಗುರುತಿಸಿ ತೆರಿಗೆ ವ್ಯಾಪ್ತಿಯಲ್ಲಿ ತರಬೇಕು. ಸ್ವಯಂ ಘೊಷಿತ ಆಸ್ತಿ ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಪ್ರತಿ ತಿಂಗಳು 2 ಕೋಟಿ ರೂ. ಬಾಕಿ ಉಳಿಸಿಕೊಂಡ ಮೊತ್ತವನ್ನು ವಸೂಲಿ ಮಾಡಲು ಹಾಗೂ ಬಡ್ಡಿ ರಹಿತ ಹಾಗೂ ತೆರಿಗೆಯಲ್ಲಿ ಶೇ 5ರಷ್ಟು ವಿನಾಯಿತಿಯ ಸದಾವಕಾಶವಿರುವ ಆಸ್ತಿ ತೆರಿಗೆದಾರರು ಇದರ ಪ್ರಯೋಜನ ಪಡೆಯುವಂತೆ ವ್ಯಾಪಕ ಪ್ರಚಾರ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ವಸತಿ ಯೋಜನೆಯ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿ ಜಿಪಿಎಸ್ ಮತ್ತು ಎಂಐಎಸ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಗರಸಭೆಯ ಎಲ್ಲ ದಾಖಲೆಗಳನ್ನು ವರ್ಗೀಕರಣಗೊಳಿಸಿ ಅವುಗಳ ಸರಿಯಾದ ನಿರ್ವಹಣೆಗೆ ಕ್ರಮ ಜರುಗಿಸಬೇಕು. ನಗರಸಭೆಯ ಅಧಿಕಾರಿ ಸಿಬ್ಬಂದಿಗೆ ಸಭೆಯಲ್ಲಿ ನಿಗದಿಪಡಿಸಲಾದ ಗುರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಮುಂದಿನ ಪ್ರಗತಿ ಪರಿಶೀಲನೆಯಲ್ಲಿ ಗುರಿ ನಿರ್ವಹಣೆ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ, ಪೌರಾಯುಕ್ತ ಮನ್ಸೂರಅಲಿ ಮತ್ತು ನಗರಸಭೆ ಅಧಿಕಾರಿ ಸಿಬ್ಬಂದಿಗಳು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net