ತೆರಿಗೆ ಪಾವತಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಿ

04 HANUR 2
Published on

ಹನೂರು: ಪ್ರತಿಯೊಬ್ಬರೂ ತೆರಿಗೆಯನ್ನು ಪಾವತಿಸುವುದರ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಕೃಷ್ಣರಾಜೇ ಅರಸ್ ತಿಳಿಸಿದರು.

ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ತೆರಿಗೆ ವಸೂಲಾತಿ ಮಾಸಾಚರಣೆ ಸಪ್ತಾಹದ ಅಂಗವಾಗಿ ಆಯೋಜಿಸಿದ್ಧ ಮನೆ ಮನೆಗೆ ತೆರಳಿ ಅರಿವು ಮೂಡಿಸುವ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಗ್ರಾಪಂಗಳು ಸಶಕ್ತ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲು ಆರ್ಥಿಕವಾಗಿ ಸಬಲೀಕರಣ ಹೊಂದುವ ಅಗತ್ಯತೆ ಇದೆ. ಹಾಗಾಗಿ, ಗ್ರಾಪಂನಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಕ್ರೋಢೀಕರಣಸಿಕೊಳ್ಳಲು ಕರ ವಸೂಲಾತಿ ಅಭಿಯಾನವನ್ನು ಗ್ರಾಪಂ ವ್ಯಾಪ್ತಿಯಲ್ಲಿ 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕೆಲವರು ತೆರಿಗೆಯನ್ನು ಪಾವತಿಸುತ್ತಾ ಬಂದಿದ್ದಾರೆ. ಆದರೆ ಕೆಲವರು ಪಾವತಿಸುವಲ್ಲಿ ಮನಸ್ಸು ಮಾಡುತ್ತಿಲ್ಲ. ಇದರಿಂದ ಅಭಿವೃದ್ಧಿಗೆ ತೊಡುಕಾಗಿ ಪರಿಣಮಿಸಿದೆ. ಆದ್ದರಿಂದ ಗ್ರಾಪಂನಿಂದ ಒದಗಿಸುವ ಸೇವೆಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ತೆರಿಗೆಯನ್ನು ಪಾವತಿಸಿಬೇಕು.

ಇದರಿಂದ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ. ಈ ಬಗ್ಗೆ ಗ್ರಾಪಂ ನೌಕರರು ಮನೆಮನೆಗೆ ತೆರಳಿ ತೆರಿಗೆ ವಸೂಲಿ ಮಾಡುವುದರ ಮೂಲಕ ಈ ಅಭಿಯಾನದಲ್ಲಿ ಕನಿಷ್ಠ 3 ಲಕ್ಷ ರೂ. ಸಂಗ್ರಹವಾಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಉಮೇಶ್, ಪಿಡಿಒ ನಂಜುಂಡಸ್ವಾಮಿ ಹಾಗೂ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net