ತೆರಕಣಾಂಬಿಯಲ್ಲಿ ಮಾಸ್ತಿ ಜನ್ಮದಿನ

07-GPT-3
Published on

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ವಿಶ್ವ ಪರಿಸರ ದಿನ ಹಾಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜನ್ಮದಿನವನ್ನು ಆಚರಿಸಲಾಯಿತು.


ಕಾರ್ಯಕ್ರಮ ಉದ್ಘಾಟಿಸಿದ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಮಾತನಾಡಿ, 50ನೇ ವರ್ಷದ ಪರಿಸರ ದಿನವನ್ನು ಸಂಭ್ರಮಕ್ಕಿಂತ ಪರಿಸರ ನಾಶವಾಗಲು ಆರಂಭವಾಗಿ 50 ವರ್ಷ ತುಂಬಿದ ಎಚ್ಚರಿಕೆ ದಿನವನ್ನಾಗಿ ಆಚರಿಸಬೇಕು. ಭಾರತದಲ್ಲಿ ಪರಿಸರ ದಿನಕ್ಕಾಗಿ 1700ನೇ ಇಸವಿಯಲ್ಲೇ ಮೊದಲ ಹೋರಾಟ ಮಾಡಿದ ಬಿಷ್ಣೋಯಿ ಜನಾಂಗದ ಅಮೃತಾದೇವಿ, ಮರ ಕಡಿಯಲು ಬಂದ ರಾಜನ ಸೈನಿಕರ ವಿರುದ್ಧ ಹೋರಾಟ ನಡೆಸಿದ್ದರು.

363 ಜನ ವೀರ ಮಹಿಳೆಯರು ಮರಗಳನ್ನು ಅಪ್ಪಿಕೊಂಡು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಹೋರಾಟ ನಡೆಸಿದ್ದರು. ಆಧುನಿಕ ಜಗತ್ತಿನಲ್ಲಿ ಪ್ಲಾಸ್ಟಿಕ್ ಪಿಡುಗಿನಿಂದ ಮಾನವರು ಮಾತ್ರವಲ್ಲ, ವನ್ಯಜೀವಿಗಳೂ ಜೀವ ಬಿಡುತ್ತಿವೆ ಎಂದ ಅವರು, ತಾವೇ ಸೆರೆಹಿಡಿದ ಛಾಯಾಚಿತ್ರ ಪ್ರದರ್ಶಿಸಿ ಮಕ್ಕಳು ಪರಿಸರ ಪ್ರೇಮ ಬೆಳೆಸಿಕೊಂಡು ಪ್ಲಾಸ್ಟಿಕ್ ಬಳಕೆ ಮಿತಗೊಳಿಸಬೇಕು ಎಂದು ತಿಳಿಸಿದರು.


ಪ್ರಾಂಶುಪಾಲ ಮಹದೇವ ಪ್ರಸಾದ್ ಮಾತನಾಡಿ, ಮಾಸ್ತಿ ವೆಂಕಟೇಶ ಅಯ್ಯಂಗಾರರು ಸಣ್ಣಕಥೆಗಳ ಜನಕ ಹಾಗೂ ಹಾಸ್ಯಪ್ರಜ್ಞೆ ಉಳ್ಳವರಾಗಿದ್ದರು. ಅವರ ಕಥೆಗಳು ನೀತಿ ಹಾಗೂ ಮಾರ್ಗದರ್ಶಕವಾಗಿದ್ದವು ಎಂದರು.
ಇದೇ ಸಮಯದಲ್ಲಿ ಶಾಲೆ ಆವರಣದಲ್ಲಿ ಸಸಿ ನೆಡಲಾಯಿತು. ಹೂವಿನ ತೋಟಕ್ಕಾಗಿ ಹಲವು ಹೂ ಕುಂಡಗಳನ್ನು ಶಾಲೆಗೆ ವಿತರಿಸಲಾಯಿತು. ಸಮಾರಂಭದಲ್ಲಿ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net