ತೆರಕಣಾಂಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶಾಸಕ ಭೇಟಿ

12-GPT-5
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಎಚ್.ಎಂ.ಗಣೇಶ್ ಪ್ರಸಾದ್ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಮಹೇಶ್, ಮಹದೇವಪ್ಪ, ಟಿ.ಎಸ್.ಶಾಂತಮಲ್ಲಪ್ಪ, ಆನಂದನಾಯ್ಕ ಇದ್ದರು.
Published on

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಸೋಮವಾರ ಭೇಟಿ ನೀಡಿ ಕಾಲೇಜು ಉಳಿಸಿಕೊಳ್ಳುವ ಸಂಬಂಧ ಗ್ರಾಮಸ್ಥರು ಹಾಗೂ ಮೈಸೂರು ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ದಿ.ಮಹದೇವಪ್ರಸಾದ್ ಅವರ ಅವಧಿಯಲ್ಲಿ ಗ್ರಾಮದಲ್ಲಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಆರಂಭಿಸಿದ್ದ ಕಾಲೇಜಿಗೆ ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ಆದರೆ ವಿದ್ಯಾರ್ಥಿಗಳ ಕೊರತೆ ಹೆಸರಿನಲ್ಲಿ ಕಾಲೇಜನ್ನು ಮೈಸೂರು ವಿಶ್ವವಿದ್ಯಾಲಯದ ವಶಕ್ಕೆ ನೀಡಲಾಗಿದೆ. ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಕಾಲೇಜು ಹಸ್ತಾಂತರವಾಗಬೇಕು ಎಂಬ ಕಾರಣಕ್ಕೆ ಮೈಸೂರು ವಿವಿ ಎರಡು ವರ್ಷವಾದರೂ ಕಾಲೇಜು ಅಭಿವೃದ್ಧಿಪಡಿಸಲು ಮುಂದಾಗಿಲ್ಲ. ಇದರಿಂದ ಈ ಭಾಗದ ವಿದ್ಯಾರ್ಥಿನಿಯರಿಗೆ ತೊಂದರೆಯಾಗಿದೆ. ಆದ್ದರಿಂದ ಮೈಸೂರು ವಿವಿ ವಶದಲ್ಲಿರುವ ಕಾಲೇಜನ್ನು ಚಾ.ನಗರ ವಿವಿ ವಶಕ್ಕೆ ನೀಡಿ ಬಿಎ ಕೋರ್ಸ್ ಆರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಪ್ರಭಾರ ಪ್ರಾಂಶುಪಾಲ ಮಹೇಶ್ ಮಾತನಾಡಿ, ಮೈಸೂರು ವಿವಿ ಶವದಲ್ಲಿರುವ ಕಾಲೇಜನ್ನು ಚಾ.ನಗರ ವಿವಿ ವ್ಯಾಪ್ತಿಗೆ ಒಳಪಡುವಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು. ಕೂಡಲೇ ಗಣೇಶ್‌ಪ್ರಸಾದ್ ಮೈಸೂರು ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದರು.

ಗ್ರಾಮೀಣ ಹೆಣ್ಣು ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಬಿಎ ಕೋರ್ಸ್ ಆರಂಭಿಸಿದರೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ನೆರವಾಗುತ್ತದೆ. ಕೂಡಲೇ ಚಾಮರಾಜನಗರ ವಿವಿಗೆ ಇಲ್ಲಿನ ಕಾಲೇಜನ್ನು ವರ್ಗಾಯಿಸಿದರೆ ಈ ವರ್ಷ ಪದವಿಗೆ ಸೇರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಕೂಡಲೇ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಮಹದೇವಪ್ಪ, ರೈತ ಮುಖಂಡ ಟಿ.ಎಸ್.ಶಾಂತಮಲ್ಲಪ್ಪ, ಮುಖಂಡರಾದ ಆನಂದನಾಯ್ಕ, ಬಸವರಾಜು, ಸ್ವಾಮಿ, ಯಜಮಾನ್ ಶ್ರೀನಿವಾಸನಾಯ್ಕ, ರಾಮು, ರವಿ , ಜಲೇಂದ್ರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net