

ಗುಂಡ್ಲುಪೇಟೆ: ಪ್ರಮುಖ ವಾಣಿಜ್ಯ ಕೇಂದ್ರವಾದ ತೆರಕಣಾಂಬಿಯ ಬಸ್ ನಿಲ್ದಾಣಕ್ಕೆ ಸಾರಿಗೆ ಸಂಸ್ಥೆಯು ಮತ್ತಷ್ಟು ಸವಲತ್ತುಗಳನ್ನು ಒದಗಿಸುವ ಮೂಲಕ ಹೈಕೆಟ್ ನಿಲ್ದಾಣವನ್ನಾಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರು ಹೆಚ್ಚಿನ ಆಸಕ್ತಿ ವಹಿಸಿದ ಪರಿಣಾಮ ಗ್ರಾಮದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿತ್ತು. 2009ರಲ್ಲಿ ಅಂದಿನ ಬಿಜೆಪಿ ಸರ್ಕಾರದ ಗೃಹ ಸಚಿವರಾಗಿದ್ದ ಡಾ.ವಿ.ಎಸ್.ಆಚಾರ್ಯ ಉದ್ಘಾಟಿಸಿದ್ದರು.
ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುವ ಆಯಕಟ್ಟಿನ ಸ್ಥಳದಲ್ಲಿ ವಿಶಾಲವಾದ ನಿಲ್ದಾಣದಲ್ಲಿ ನಿರ್ಮಿಸಿದ ನಿಲ್ದಾಣದಲ್ಲಿ ಹೋಟೆಲ್ ಮತ್ತು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ಕೊಟ್ಟಿದ್ದರು.
ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಶುಚಿತ್ವದಿಂದ ಕೂಡಿದ ಶೌಚಗೃಹ, ಬೀದಿದೀಪಗಳನ್ನು ಅಳವಡಿಸಿ ಸುತ್ತಲೂ ಸಸಿಗಳನ್ನು ನೆಟ್ಟು ಬೆಳೆಸಿದ್ದರಿಂದ ನಿಲ್ದಾಣವು ಗಿಡಮರಗಳಿಂದ ಕಂಗೊಳಿಸುತ್ತಾ ಸುಡು ಬೇಸಿಗೆಯಲ್ಲಿಯೂ ತಂಪಾಗಿತ್ತು. ಬೆಳಗ್ಗೆ ಕಾಫಿ, ಟೀ ಕುಡಿಯುವ ಹಾಗೂ ಉಪಾಹಾರಕ್ಕಾಗಿ ಬರುವವರ ಸಂಖ್ಯೆಯೂ ಹೆಚ್ಚಾಗಿದ್ದರಿಂದ ಬಸ್ ನಿಲ್ದಾಣದಲ್ಲಿ ಜನಜಂಗುಳಿ ಹೆಚ್ಚಾಗಿತ್ತು.
ಆದರೆ ಸಾರಿಗೆ ಸಂಸ್ಥೆಯು ನಿಲ್ದಾಣವನ್ನು ಅಭಿವೃದ್ಧಿಗೊಳಿಸಲು ಯಾವುದೇ ಕ್ರಮಕೈಗೊಳ್ಳದ ಪರಿಣಾಮ ನಿಲ್ದಾಣದೊಳಗೆ ಜನರ ಓಡಾಟ ಕಡಿಮೆಯಾಗುವಂತಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಸಾರಿಗೆ ಇಲಾಖೆ ಹೆಚ್ಚಿಸುವ ಬಾಡಿಗೆ ದರದಿಂದಾಗಿ ನಿಲ್ದಾಣದ ಒಳಗೆ ಇದ್ದ ಅಂಗಡಿ ಹಾಗೂ ಹೋಟೆಲ್‌ಗಳ ನಿರ್ವಹಣೆ ಸಾಧ್ಯವಾಗದೆ ಮಳಿಗೆಗಳು ಮುಚ್ಚಲಾಗಿದೆ. ಇದರಿಂದ ಬಸ್ಸು ಹತ್ತಲು ಕಾಯುವ ಪ್ರಯಾಣಿಕರು ಮಾತ್ರ ಬಸ್ ನಿಲ್ದಾಣದೊಳಗೆ ಬರುವಂತಾಗಿದ್ದರಿಂದ ಜನಸಂಚಾರ ಕಡಿಮೆಯಾಗುತ್ತಿದೆ.
ಮೇಲ್ದರ್ಜೆಗೇರಿಸಲು ಒತ್ತಾಯ: ವಿಶಾಲ ಸ್ಥಳದಲ್ಲಿರುವ ನಿಲ್ದಾಣವನ್ನು ಮತ್ತಷ್ಟು ಮೇಲ್ದರ್ಜೆಗೇರಿಸಿ ಅಭಿವೃದ್ಧಿಗೊಳಿಸಿದರೆ ಸಾರಿಗೆ ಸಂಸ್ಥೆಗೆ ಉತ್ತಮ ಆದಾಯ ಬರುವ ಜತೆಗೆ ಸಾರ್ವಜನಿಕರಿಗೂ ಉತ್ತಮ ಸೇವೆ ದೊರಕಲಿದೆ. ಸದ್ಯ ಗ್ರಾಮದ ಮಾರ್ಗವಾಗಿ ಗ್ರಾಮಾಂತರ ಪ್ರದೇಶಗಳಿಗೆ ಹಾಗೂ ಜಿಲ್ಲಾ ಕೇಂದ್ರಕ್ಕೆ ಹೋಗಿಬರುವ ಬಸ್ಸುಗಳು ಮಾತ್ರ ನಿಲ್ದಾಣದೊಳಗೆ ಬರುತ್ತಿವೆ. ಆದರೆ ಕೆಲವು ಬಸ್ಸುಗಳನ್ನು ಈ ನಿಲ್ದಾಣದಿಂದಲೇ ಗ್ರಾಮಾಂತರ ಪ್ರದೇಶಗಳಿಗೆ ಹೋಗುವಂತೆ ಮಾಡಬೇಕು. ಅಲ್ಲದೆ ಸಮೀಪದ ಆಂಜನೇಯಸ್ವಾಮಿ ದೇವಾಲಯದ ಬಳಿ ನಿಲ್ಲುವ ಬೊಮ್ಮಲಾಪುರ ಮತ್ತು ಬೊಮ್ಮನಹಳ್ಳಿ ಮಾರ್ಗದ ಬಸ್ಸುಗಳು ನಿಲ್ದಾಣದಿಂದಲೇ ಹೋಗುವಂತೆ ಮಾಡಿದರೆ ಈ ಬಸ್ಸುಗಳಿಗಾಗಿ ಕಾಯುವ ಪ್ರಯಾಣಿಕರು ನಿಲ್ದಾಣದಲ್ಲಿಯೇ ಉಳಿಯುತ್ತಾರೆ. ಆದ್ದರಿಂದ ನಿಲ್ದಾಣಕ್ಕೆ ಇನ್ನೂ ಹಲವಾರು ಸವಲತ್ತುಗಳನ್ನು ನೀಡುವ ಮೂಲಕ ಹೈಟೆಕ್ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪರಿಸರ ಹಾಗೂ ಜನಸ್ನೇಹಿ ನಿಲ್ದಾಣ: ನಿಲ್ದಾಣದ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಟ್ರಾಫಿಕ್ ಕಂಟ್ರೋಲರ್ ವಿಠಲ ಅವರು ಸಂಘ ಸಂಸ್ಥೆಗಳು ಹಾಗೂ ಪರಿಸರಾಸಕ್ತರ ನೆರವಿನಿಂದ ಸುಮಾರು 40 ಕ್ಕೂ ಹೆಚ್ಚಿನ ಹೊಂಗೆ ಸಸಿಗಳನ್ನು ನೆಟ್ಟು ಪ್ರತಿ ದಿನವೂ ತಾವೇ ನೀರುಣಿಸಿ ಬೆಳೆಸಿದ್ದಾರೆ. ಸದ್ಯ ಎಲ್ಲ ಮರಗಳೂ ಎತ್ತರವಾಗಿ ಬೆಳೆದು ಪ್ರಯಾಣಿಕರಿಗೆ ನೆರಳು ನೀಡುತ್ತಿವೆ. ಬೇಸಿಗೆ ಸಂದರ್ಭದಲ್ಲಿಯೂ ಇಡೀ ನಿಲ್ದಾಣದಲ್ಲಿ ತಣ್ಣನೆಯ ವಾತಾವರಣವಿದೆ. ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಯೋವೃದ್ಧರಿಗೆ ಅವರು ಹೋಗಬೇಕಾದ ಬಸ್‌ಗಳ ಬಗ್ಗೆ ಮಾರ್ಗದರ್ಶನ ನೀಡುವ ಜತೆಗೆ ಪ್ರಯಾಣಿಕರು ಬಸ್ಸಿನಲ್ಲಿ ಬಿಟ್ಟುಹೋದ ಮೊಬೈಲ್, ಪರ್ಸ್, ಕಂದಾಯ ದಾಖಲೆಗಳು ಮುಂತಾದ ವಸ್ತುಗಳನ್ನು ಮಾಲೀಕರಿಗೆ ತಲುಪಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.