

ಚಿತ್ರದುರ್ಗ: ಎಸ್ಸಿ ಮೀಸಲು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ತೆನೆಹೊತ್ತ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ಅವರು ಗೆಲುವಿನ ಕಹಳೆ ಊದಿದ್ದೆ ತಡ, ಇತ್ತ ಹೊರಭಾಗದಲ್ಲಿ ಅಭಿಮಾನಿಗಳ ಸಂಭ್ರಮವೂ ಜೋರಾಗಿತ್ತು.
ಕೇಂದ್ರದಿಂದ ಹೊರ ನಡೆದ ಅವರನ್ನು ಅಭಿಮಾನಿಗಳು ಮುತ್ತಿಗೆ ಹಾಕಿ ವಿಜಯಮಾಲೆ ಹಾಕುವ ಮೂಲಕ ಭವ್ಯವಾಗಿ ಸ್ವಾಗತಿಸಿದರು. ಪಂಚಾಚಾರ್ಯ ಕಲ್ಯಾಣ ಮಂಟಪ ಮುಂಭಾಗ ಕೇಸರಿ ಬಣ್ಣವನ್ನು ಪರಸ್ಪರ ಎರಚುವ ಮೂಲಕ ಸಂತಸದಲ್ಲಿ ತೇಲಾಡಿದರು. ಈ ವೇಳೆ ಕಾರಜೋಳ, ಅವರು ಕೂತಿದ್ದ ಕಾರು, ನೂರಾರು ಕಾರ್ಯಕರ್ತರು ಧರಿಸಿದ್ದ ಶ್ವೇತ ವಸ್ತ್ರ ಕೇಸರಿಮಯವಾಯಿತು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಬಿಜೆಪಿ-ಜೆಡಿಎಸ್ ಬಾವುಟ ಆರಿಸಿ ಸಂತಸ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿಗೆ ಜೈ, ಗೋವಿಂದ ಕಾರಜೋಳಗೆ ಜೈ ಎಂದು ಹಷೋದ್ಗಾರ ಮೊಳಗಿಸಿದರು. ಮದಕರಿನಾಯಕ, ಗಾಂಧಿ ವೃತ್ತ ಸೇರಿ ಕೆಲವೆಡೆ ಪಟಾಕಿ ಸಿಡಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದರು. ಬೈಕ್ ರ‌್ಯಾಲಿಯಲ್ಲೂ ಭಾಗಿಯಾದರು.
ಹೆಚ್ಚಿಸಿದ ಕುತೂಹಲ: ಮೊದಲ ಸುತ್ತಿನಿಂದ 22 ಸುತ್ತು ಪೂರ್ಣಗೊಳ್ಳುವವರೆಗೂ ಕುತೂಹಲ ಮನೆ ಮಾಡಿತ್ತು. ಮತದಾರರು ಮನೆಗಳಲ್ಲಿ ಟಿವಿ, ಅಭಿಮಾನಿಗಳು ಮತ್ತು ಕಾರ್ಯಕರ್ತರು ಮೊಬೈಲ್‌ಗಳ ಮೂಲಕ ಮುನ್ನಡೆ, ಫಲಿತಾಂಶ ವೀಕ್ಷಿಸಲು ಮುಂದಾದರು.
ಮೊದಲ ಹೊರತುಪಡಿಸಿ ಇನ್ನುಳಿದ 21 ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಂಡ ಕಾರಣ ಬಿಜೆಪಿ-ಜೆಡಿಎಸ್ ಮುಖಂಡರಲ್ಲಾಗಲಿ, ಬೆಂಬಲಿಗರಲ್ಲಾಗಲಿ, ಕಾರ್ಯಕರ್ತರಲ್ಲಾಗಲಿ ಆತಂಕ ಮನೆ ಮಾಡಲಿಲ್ಲ. ಆದರೆ, ಕೊನೆ-ಕೊನೆಗೆ ಕೈ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರಿಗೆ ತಳಮಳ ಉಂಟಾಗಿ ಸೋಲುವ ಭೀತಿ ಕಾಡಲಾರಂಭಿಸಿತು. ಹೀಗಾಗಿ ಕೇಂದ್ರದತ್ತ ಕಾಂಗ್ರೆಸ್‌ನ ಯಾವೊಬ್ಬ ಶಾಸಕರು ಸುಳಿಯಲಿಲ್ಲ.
ಪೊಲೀಸ್ ಸರ್ಪಗಾವಲು: ಮತ ಎಣಿಕೆ ಕೇಂದ್ರವಾದ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣ ಹಾಗೂ ಕೇಂದ್ರದೊಳಗೆ ಬಿಗಿ ಪೊಲೀಸ್ ಸರ್ಪಗಾವಲು ನಿರ್ಮಾಣವಾಗಿತ್ತು. ಜಿಲ್ಲಾ ಚುನಾವಣಾಧಿಕಾರಿ ನೀಡಿದ ಗುರುತಿನ ಚೀಟಿ ಹೊರತುಪಡಿಸಿ ಬೇರಿನ್ಯಾವುದೇ ಕಾರ್ಡ್‌ಗೂ ಪ್ರವೇಶಾತಿಗೆ ಅವಕಾಶ ನೀಡಲಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ಭದ್ರತೆ ಪರಿಶೀಲನೆ ನಡೆಸಿದರು. ಎಎಸ್‌ಪಿ ಕುಮಾರಸ್ವಾಮಿ, ಡಿವೈಎಸ್‌ಪಿ ದಿನಕರ್ ಸಾಥ್ ನೀಡಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಹೋದರ ಡಾ.ಎಂ.ಪಿ.ದಾರಕೇಶ್ವರಯ್ಯ ಕೂಡ ಕಣದಲ್ಲಿದ್ದರು. ಆದರೆ, 1,397 ಮತ ಪಡೆದಿದ್ದು, ಠೇವಣಿ ಕೂಡ ಪಡೆಯಲಾಗಲಿಲ್ಲ. ಇನ್ನುಳಿದ ವಿವಿಧ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 17 ಮಂದಿ 41,068 ಮತಗಳನ್ನು ಪಡೆದಿದ್ದಾರೆ. ಇದು ಬಿಜೆಪಿ-ಜೆಡಿಎಸ್ ಮೈತ್ರಿ, ಕಾಂಗ್ರೆಸ್ ಇಬ್ಬರೂ ಅಭ್ಯರ್ಥಿಗಳ ಗೆಲುವು ಮತ್ತು ಸೋಲಿನ ಲೆಕ್ಕಾಚಾರದಲ್ಲಿ ಅನುಕೂಲ ಹಾಗೂ ಅನಾನುಕೂಲವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಫಲಿಸಿದ ಪೂಜಾ ಫಲ: ಗೋವಿಂದ ಕಾರಜೋಳ ಅವರು ಕ್ಷೇತ್ರ ಪ್ರವೇಶಿಸಿದ ನಂತರ ಜಿಲ್ಲೆಯ ಪುಣ್ಯಕ್ಷೇತ್ರ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದರ್ಶನ ಪಡೆದಿದ್ದರು. ಕೋಟೆನಗರಿಯ ರಾಜಮಾತೆ ಉಚ್ಚಂಗಿಯಲ್ಲಮ್ಮ, ನಗರದೇವತೆ ಬರಗೇರಮ್ಮ, ನೀಲಕಂಠೇಶ್ವರ ಸ್ವಾಮಿ ಸೇರಿ ಇತರೆ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆಗೂ ಮುನ್ನ ದೇವರ ದರ್ಶನ ಪಡೆದಿದ್ದರು. ಫಲಿತಾಂಶ ಹಿನ್ನಲೆಯಲ್ಲಿ ಮಂಗಳವಾರ ಜೆಸಿಆರ್ ಬಡಾವಣೆಯ ಗಣಪತಿ ದೇಗುಲದಲ್ಲೂ ಪೂಜೆ ಸಲ್ಲಿಸಿದ್ದರು. ಬಿಜೆಪಿಗರು ಭಾರತೀಯ ಸಂಸ್ಕೃತಿ, ಸಂಸ್ಕಾರ ಹಾಗೂ ದೇವರ ಮೇಲೆ ನಂಬಿಕೆ ಉಳ್ಳವರಾಗಿದ್ದಾರೆ. ಹೀಗಾಗಿ ಪೂಜಾ ಫಲವೂ ಕಾರಣವೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಫಲಿಸದ ಗ್ಯಾರಂಟಿ ಯೋಜನೆಗಳು: ಚುನಾವಣೆ ಆರಂಭದಿಂದ ಪ್ರಚಾರ ಭರಾಟೆಯಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು, ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿದ್ದ ಹೊಸ ಗ್ಯಾರಂಟಿಗಳೂ ಈ ಚುನಾವಣೆಯಲ್ಲಿ ಖಂಡಿತ ಕೈಹಿಡಿಯಲಿವೆ ಎಂಬ ಅಚಲ ವಿಶ್ವಾಸವನ್ನು ಬಿ.ಎನ್.ಚಂದ್ರಪ್ಪ ಮಾತ್ರವಲ್ಲ, ಕಾಂಗ್ರೆಸ್ಸಿಗರೂ ಹೊಂದಿದ್ದರು. ಆದರೆ, ಲೆಕ್ಕಾಚಾರ ತಲೆಕೆಳಗಾಗಿದ್ದು, ಅಚ್ಚರಿಗೆ ಕಾರಣವಾಗಿದೆ.
ಫಲಿತಾಂಶ ಘೋಷಣೆ ದೇಶದಲ್ಲೇ ಮೊದಲು: ಮತ ಎಣಿಕೆಯಲ್ಲೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರ ಫಲವಾಗಿ ದೇಶದಲ್ಲೇ ಎನ್‌ಕೋರ್ (ಉಘೆಇಣ್ಕಉ) ತಂತ್ರಾಂಶದಲ್ಲಿ ಪ್ರಥಮವಾಗಿ ಚುನಾವಣಾ ಫಲಿತಾಂಶ ಪ್ರಕಟಿಸಿದ ಹೆಗ್ಗಳಿಕೆ ಚಿತ್ರದುರ್ಗ ಎಸ್ಸಿ ಲೋಕಸಭಾ ಕ್ಷೇತ್ರಕ್ಕೆ ಸಲ್ಲುತ್ತದೆ ಎಂದು ಜಿಲ್ಲಾ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಆರಂಭದಿಂದ ಮತ ಎಣಿಕೆ ಕಾರ್ಯ ಮುಕ್ತಾಯದವರೆಗೂ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರ್‌ಗಳು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರೆಲ್ಲರ ಸಹಕಾರದಿಂದ ಚುನಾವಣೆ ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.