

ಹಾಸನ: ರಾಜ್ಯದಲ್ಲಿ ತೆಂಗು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಣ್ಣು ತೆರೆಸುವ ಹಿನ್ನೆಲೆಯಲ್ಲಿ ಅರಸೀಕೆರೆಯಿಂದ ತುಮಕೂರಿನವರೆಗೆ ಬೃಹತ್ ಪಾದಯಾತ್ರೆಯನ್ನ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ತೆಂಗು ಬೆಳೆಗಾರರ ಹಿತಕಾಯುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ, ಎರಡು ಸರ್ಕಾರದ ಧೋರಣೆಯನ್ನ ಖಂಡಿಸಿ ವಿಧಾನಸಭೆ ಅಧಿವೇಶನ ಮುಗಿದ ನಂತರ ಪಾದಯಾತ್ರೆಯನ್ನ ಹಮ್ಮಿಕೊಳ್ಳಲಾಗುವುದು ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೊದಲು ಡಿಕೆ.ಶಿವಕುಮಾರ್ ಅವರು ತೆಂಗು ಬೆಳೆಗಾರರ ಹಿತಕಾಯಲು ನಾವು ಬದ್ಧವಾಗಿದ್ದೇವೆ ಎಂದು ಹೇಳಿದ್ದರು, ಆದರೆ,ಈಗ ಅವರಿಗೆ ಸರಿಯಾದ ರೀತಿ ಬೆಂಬಲಬೆಲೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ರೈತರಿಗೆ ಭಿಕ್ಷೆ ಕೊಡುವ ರೀತಿ ಹಣ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತೀವ್ರ ಬರಗಾಲದಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ .ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದೆ. ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡ ಕಾರಣಕ್ಕೆ ಸುಮ್ಮನೆ ಕೂರುವುದಿಲ್ಲ, ಕೇಂದ್ರ ಸರ್ಕಾರವನ್ನು ಕೂಡ ಮನವಿ ಮಾಡಲಾಗುವುದು, ಅಲ್ಲದೆ ರಾಜ್ಯ ಸರ್ಕಾರವು ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಉಂಟಾಗಿರುವ ಬರಗಾಲದಿಂದ ಸುಮಾರು 35 ಸಾವಿರ ಕೋಟಿ ಬೆಲೆ ನಷ್ಟವಾಗಿದೆ ಎಂದು ವರದಿ ತಯಾರಿಸಲಾಗಿದೆ,ಅಲ್ಲದೆ ಕೇಂದ್ರಕ್ಕೆ 18ಸಾವಿರ ಕೋಟಿ ರೂ ಬೆಳೆ ಪರಿಹಾರವನ್ನು ಕೇಳಲಾಗಿದೆ. ಕೇಂದ್ರ ಸರ್ಕಾರ ಇದನ್ನು ಕೊಡಲು ಸಾಧ್ಯವಿಲ್ಲ, ಏಕೆಂದರೆ ಈಗಾಗಲೇ ಎನ್‌ಡಿಆರ್‌ಎಫ್ ಗೈಡ್‌ಲೈನ್ ಪ್ರಕಾರ 350 ಕೋಟಿ ರೂ ಅನುದಾನ ನೀಡಿದ್ದಾರೆ. ಇದನ್ನ ಜಿಲ್ಲಾಧಿಕಾರಿಗಳ ಖಾತೆಗೆ ಹಾಕಿದ್ದಾರೆ. ಅದನ್ನ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ರೈತರನ್ನು ನಿರ್ಲಕ್ಷ ಮಾಡಲಾಗುತ್ತಿದೆ. ತೆಂಗು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಲು ಹಾಗೂ ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರದ ಬಳಿ ಹಣದ ಕೊರತೆ ಇದೆ. ಆದರೆ ಸರ್ಕಾರಕ್ಕೆ ಹೊಸ ಕಾರು ಖರೀದಿ ಮಾಡಲು ಹಾಗೂ ಮನೆಗಳ ನವೀಕರಣಕ್ಕೆ ಕೋಟ್ಯಂತರರು ಖರ್ಚು ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು 20 ಲಕ್ಷ ರೈತರಿಗೆ ಎರಡುವರೆ ಕೋಟಿ ಬೆಲೆ ಪರಿಹಾರ ಹಣ ಬರುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನ ಅವರು ತಿಳಿಸಬೇಕು. ಗ್ಯಾರಂಟಿ ಯೋಜನೆಯಿಂದಾಗಿ ಆರು ತಿಂಗಳಿನಿಂದ ಯಾವುದೇ ಒಂದೇ ಒಂದು ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಸರ್ಕಾರದ ಪ್ರಚಾರಕ್ಕಾಗಿ 140 ಕೋಟಿ ರೂ ಜಾಹೀರಾತು ಬಿಲ್ಲನ್ನು ಬಾಕಿ ಉಳಿಸಿಕೊಂಡಿರುವ ಇವರು ರೈತರಿಗೆ ಇನ್ಯಾವ ಅನುಕೂಲ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಮತ್ತು ದೇಶಕ್ಕೆ ಅನ್ನ ನೀಡುವಂತಹ ಅನ್ನದಾತನ ಬದುಕು ಹೇಳುತ್ತೀರದಾಗಿದೆ. ಅವರಿಗಾಗಿ ಒಂದು ಯೋಜನೆಯನ್ನು ಜಾರಿಗೆ ತಂದಿಲ್ಲ.ಇವರದು ರೈತಪರ ಸರ್ಕಾರ ಮತ್ತು ರೈತಪರ ನಾಯಕರು ಎಂದು ವಾಗ್ದಾಳಿ ನಡೆಸಿದರು.