

ಹಾಸನ: ತೆಂಗು ಬೆಳೆ ರೋಗ ನಿಯಂತ್ರಣ ಮತ್ತು ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಮುಂದಿನ ವಾರ ಜಿಲ್ಲಾಧಿಕಾರಿ ಕಚೇರಿ ಎದುರು ತೆಂಗಿನಕಾಯಿ ಒಡೆಯುವ ಚಳವಳಿ ನಡೆಸಲಾಗುವುದು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಎಚ್ಚರಿಸಿದರು.
ನಗರದ ಸಂಸದರ ಮನೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಬಲ ಬೆಲೆ ನೀಡುವಂತೆ ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೂ ಸರ್ಕಾರ ಇದರ ಬಗ್ಗೆ ಗಮನಹರಿಸುತ್ತಿಲ್ಲ. ಆದ್ದರಿಂದ ಅರ್ಚಕರನ್ನು ಕರೆದುಕೊಂಡು ಬಂದು ಜಿಲ್ಲೆಯಲ್ಲಿರುವಂತಹ ಎಲ್ಲಾ ದೇವರ ಹೆಸರಿನಲ್ಲಿ ಪ್ರತಿ ದೇವರಿಗೆ 101 ತೆಂಗಿನ ಕಾಯಿಯನ್ನು ಒಡೆಯುವ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಹಾಸನ ಸೇರಿದಂತೆ ಸುಮಾರು 2.95 ಲಕ್ಷ ಎಕರೆ ಪ್ರದೇಶದ ತೆಂಗು ಬೆಳೆಯಲ್ಲಿ ಶೇ.50ರಷ್ಟು ರೋಗದಿಂದ ಫಸಲು ಹಾಳಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ತೆಂಗು ಬೆಳೆಗೆ ಔಷಧ ಸಿಂಪರಣೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬರಗಾಲದಿಂದ ಈಗಾಗಲೇ ಜಿಲ್ಲಾಡಳಿತ ಎನ್‌ಡಿಆರ್‌ಎಫ್ ಪ್ರಕಾರ 131 ಕೋಟಿ ರೂ. ನಷ್ಟವಾಗಿದೆ ಎಂದು ವರದಿ ನೀಡಿದೆ. ಆ ಹಿನ್ನೆಲೆಯಲ್ಲಿ ರೈತರಿಗೆ ಶೀಘ್ರದಲ್ಲೇ ಬೆಳೆ ಪರಿಹಾರವನ್ನು ನೀಡಬೇಕು. ಜಿಲ್ಲೆಯಲ್ಲಿ 1,54,600 ಪ್ರದೇಶದಲ್ಲಿ ರಾಗಿ, ಜೋಳ, ಭತ್ತ ಸೇರಿದಂತೆ ಇನ್ನಿತರ ಬೆಳೆಗಳು ನಾಶವಾಗಿದ್ದು, ಶೇ.95ಕ್ಕಿಂತ ಹೆಚ್ಚಿನ ಬೆಳೆ ನಷ್ಟವಾಗಿದೆ ಎಂದು ತೋಟಗಾರಿಕೆ, ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ 1020 ಪ್ರಾಥಮಿಕ ಶಾಲೆ ಮತ್ತು 88 ಪ್ರೌಢಶಾಲೆಗಳು ದುರಸ್ತಿಯಲ್ಲಿದ್ದು, ಅದಕ್ಕಾಗಿ ಈಗಾಗಲೇ 20 ಕೋಟಿ ರೂ. ವೆಚ್ಚಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳೆದ ವರ್ಷ ಮಳೆ ಹಾನಿಯಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದವು, ಅದಕ್ಕೆ ಇದುವರೆಗೂ ಹಣ ನೀಡಿಲ್ಲ. ಬರಗಾಲದಿಂದ ದನ- ಕರುಗಳಿಗೆ ಮೇವಿನ ಕೊರತೆ ಎದುರಾಗಲಿದೆ. ಅಲ್ಲದೆ ಜಾನುವಾರುಗಳಿಗೆ ರೋಗಗಳು ಹರಡುತ್ತಿದ್ದು, ಅದನ್ನು ನಿಯಂತ್ರಣ ಮಾಡಲು ಔಷಧ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು?
ನಮ್ಮ ಮೇಲೆ ಆಪಾದನೆ ಮಾಡುವ ಗಿರಾಕಿ ಆರು ವರ್ಷ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅವರ ಕೊಡುಗೆ ಏನು ಮತ್ತು ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಜಿಲ್ಲೆಗೆ ಯಾವ ಕೊಡುಗೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಮಾಜಿ ಎಂಎಲ್‌ಸಿ ಗೋಪಾಲಸ್ವಾಮಿ ಅವರ ಹೆಸರೇಳದೆ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ಅವರ ಹೋರಾಟದಿಂದ 24 ಮೇಲ್ಸೇತುವೆಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಇವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ. ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಈ ಗಿರಾಕಿ ಲೂಟಿ ಮಾಡಿದ. ನಾವು ಯಾರ ಹಂಗಿನಲ್ಲಿಯೂ ಕೂಡ ರಾಜಕಾರಣ ಮಾಡುತ್ತಿಲ್ಲ. ದೇವೇಗೌಡರ ಹಂಗಿನಲ್ಲಿ ಕಾಂಗ್ರೆಸ್ ಇದೆ ಎಂದು ಗೋಪಾಲಸ್ವಾಮಿ ಹೇಳಿಕೆಗೆ ರೇವಣ್ಣ ಟಾಂಗ್ ನೀಡಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಿಯು ಕಾಲೇಜು, 3ಇಂಜಿನಿಯರಿಂಗ್ ಕಾಲೇಜು, ಆಸ್ಪತ್ರೆ ಹಾಗೂ ಹಲವು ರಸ್ತೆಗಳ ಅಭಿವೃದ್ಧಿಯನ್ನು ಮಾಡಲಾಗಿದೆ. ಇವರು ಅಧಿಕಾರದಲ್ಲಿದ್ದಾಗ ಏನು ಮಾಡಿದರು ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದರು.
ದೇವೇಗೌಡರ ಕುತ್ತಿಗೆ ಕುಯ್ದಿದ್ದು ಕಾಂಗ್ರೆಸ್:
ದೇವೇಗೌಡರನ್ನ ತುಮಕೂರಿಗೆ ಕರೆದುಕೊಂಡು ಹೋಗಿ ಲೋಕಸಭಾ ಚುನಾವಣೆಗೆ ನಿಲ್ಲಿಸಿ ಅವರ ಕುತ್ತಿಗೆಯನ್ನು ಕುಯ್ದಿದ್ದು ಕಾಂಗ್ರೆಸ್‌ನವರು ಎಂದು ರೇವಣ್ಣ ಆರೋಪಿಸಿದರು.
ಅದೇ ರೀತಿ ಮಂಡ್ಯದಲ್ಲಿ ಕುಮಾರಸ್ವಾಮಿ ಮಗ, ಕೋಲಾರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮುನಿಯಪ್ಪ ಅವರನ್ನು ಸೋಲಿಸಿದ್ದು ಯಾರು? ಎಂಬುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಇವರು ಲೂಟಿ ಹೊಡೆದು, ಮಜಾ ಮಾಡಿದರು. ಅಧಿಕಾರಕ್ಕಾಗಿ ದೇವೇಗೌಡರ ಕಾಲು ಕಟ್ಟಿಕೊಂಡು ನಂತರ ಅವರಿಗೆ ಚಾಕು ಹಾಕಿದರು ಎಂದು ದೂರಿದರು.
ಕೆಎಂಶಿ ದೊಡ್ಡವರು
ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡರು ದೊಡ್ಡವರು. ಹಿರಿಯ ರಾಜಕಾರಣಿ. ಎತ್ತರಕ್ಕೆ ಬೆಳೆದಿದ್ದಾರೆ. ಅವರ ಬಗ್ಗೆ ಮಾತನಾಡುವಷ್ಟು ಶಕ್ತಿ ನಮಗಿಲ್ಲ. ಅನುಭವಿ ರಾಜಕಾರಣಿ, ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿಯಾಗಿದ್ದಾರೆ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಮುಂಬರುವ ದಿನಗಳಲ್ಲಿ ಇದಕ್ಕೆ ಉತ್ತರ ನೀಡುತ್ತೇನೆ ಎಂದು ಲೇವಡಿ ಮಾಡಿದರು.