

ಸಿದ್ದಾಪುರ: ತಾಲೂಕಿನಾದ್ಯಂತ ವಾನರರ ದಾಳಿಗೆ ಅಡಕೆ, ಬಾಳೆಯೊಂದಿಗೆ ತೆಂಗಿನ ಕಾಯಿಯೂ ನಾಶವಾಗುತ್ತಿದ್ದು ಬೆಳೆಯನ್ನು ಉಳಿಸಿಕೊಳ್ಳುವುದಕ್ಕೆ ರೈತರು ಹೈರಾಣಾಗುತ್ತಿದ್ದಾರೆ.
ವಾನರರ ಚಿತ್ತ ತೆಂಗಿನ ಮರದತ್ತ ಬಿದ್ದಿದ್ದು ನಿತ್ಯ ಹತ್ತಾರು ಮಂಗಗಳು ತೆಂಗಿನಮರ ಏರಿ ಸಣ್ಣ ಸಣ್ಣ ಮಿಳ್ಳೆಗಳನ್ನು ಕೊಯ್ದು ಹಾಕುವುದಲ್ಲದೇ ಎಳೆನೀರು ಕುಡಿದು ಬೀಸಾಡುತ್ತಿರುವುದರಿಂದ ಜನತೆ ಕಂಗೆಟ್ಟುಹೋಗಿದ್ದಾರೆ.
ಮಂಗಗಳ ಕಾಟ ಒಂದೆರಡಲ್ಲ. ಮನೆಯ ಹಿತ್ತಲಿನಲ್ಲಿನಲ್ಲಿರುವ ಹೂವಿನ ಗಿಡ, ತರಕಾರಿಗಳನ್ನು ನಾಶಪಡಿಸುತ್ತಿರುವುದಲ್ಲದೇ ಮನೆಯ ಹೆಂಚುಗಳನ್ನು ತೆಗೆದು ಮನೆಯೊಳಗೂ ನುಗ್ಗಿ ದಾಳಿ ನಡೆಸಿ ಇದ್ದ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿ ಹರಡಿ ದಾಂದಲೆ ನಡೆಸುತ್ತಿದೆ.
ಮಂಗನಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅವುಗಳ ನಿಯಂತ್ರಣವನ್ನು ಸಂಬಂಧ ಪಟ್ಟ ಅರಣ್ಯ ಇಲಾಖೆ ಮಾಡದಿದ್ದರೆ ಮುಂದಿನ ದಿನದಲ್ಲಿ ಜನತೆ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.
ಕಾಡುಪ್ರಾಣಿಗಳಿಂದ ಭತ್ತ, ಬಾಳೆ, ಅಡಕೆ ಸಸಿ ಹಾನಿ ಆದ ಕುರಿತು ಪರಿಹಾರ ನೀಡಲಾಗುತ್ತಿದೆ. ತೆಂಗು ಮತ್ತಿತರ ಬೆಳೆಗಳು ನಾಶವಾಗಿದ್ದಲ್ಲಿ ಬೆಳೆಗಾರರು ಅರಣ್ಯ ಇಲಾಖೆಗೆ ಅರ್ಜಿ ನೀಡಿದರೆ ಅವುಗಳನ್ನು ಪರಿಶೀಲಿಸಿ ಪರಿಹಾರ ನೀಡಲಾಗುವುದು.| ಸಿ.ಎನ್.ಹರೀಶ ಎಸಿಎಫ್ ಸಿದ್ದಾಪುರ