ತೆಂಗು ಕೃಷಿಗೆ ಆದ್ಯತೆ ಕೊಡಿ

tengu dinacharane
Published on

ಬೀದರ್: ತೆಂಗಿನ ಯಾವುದೇ ಉತ್ಪನ್ನ ನಿರುಪಯೋಗಿ ಅಲ್ಲ. ಅದರ ಎಲ್ಲ ಭಾಗಗಳೂ ಉಪಯುಕ್ತ. ಹೀಗಾಗಿ ತೆಂಗು ಕೃಷಿಗೆ ಆದ್ಯತೆ ನೀಡಬೇಕು ಎಂದು ತೋಟಗಾರಿಕೆ ಕಾಲೇಜಿನ ಡೀನ್ ಡಾ.ಎಸ್.ವಿ. ಪಾಟೀಲ್ ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಸಹಯೋಗದಡಿ ನಗರದ ತೋಟಗಾರಿಕೆ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವ ತೆಂಗು ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಎಳೆಯದಿದ್ದಾಗ ಎಳನೀರು, ಬಲಿತರೆ ತೆಂಗಿನಕಾಯಿ, ಒಣಗಿದ್ದರೆ ಕೊಬ್ಬರಿ, ಎಣ್ಣೆ, ಕಸಗುಡಿಸಲು ಪೊರಕೆ, ಮದುವೆಗೆ ಚಪ್ಪರ, ಛಾವಣಿಗೆ ಹೊದಿಕೆ, ಹೊಲಗಳಿಗೆ ಗೊಬ್ಬರ, ಔಷಧ ಹೀಗೆ ತೆಂಗಿನ ಉಪಯೋಗಗಳು ಅನೇಕ ಎಂದರು.
ಅಂತರ ಬೇಸಾಯ ಪದ್ಧತಿಯಲ್ಲಿ ಈವರೆಗೆ ತೆಂಗು ಬೆಳೆ ಬೆಳೆಯಲಾಗುತ್ತಿತ್ತು. ಆದರೆ ತೆಂಗನ್ನೇ ಪ್ರಮುಖ ಬಹು ವಾರ್ಷಿಕ ಬೆಳೆಯಾಗಿ ರೈತರು ಬೆಳೆದರೆ ನಿರಂತರ ಆದಾಯ ಗಳಿಸಬಹುದು. ತೆಂಗಿನ ಇತರ ಉತ್ಪನ್ನಗಳಿಂದಲೂ ಆದಾಯ ಬರಲಿದೆ. ಹೀಗಾಗಿ ಪ್ರಗತಿಪರ ರೈತರು ದೇಸಿ ತಳಿಯ ತೆಂಗನ್ನು ರಕ್ಷಿಸಿ ಮುಂದಿನ ತಲೆಮಾರಿಗೂ ಕೊಡುಗೆಯಾಗಿ ನೀಡಬೇಕು ಎಂದು ಸಲಹೆ ನೀಡಿದರು.
ತೆಂಗಿನ ಬೇಸಾಯ ಕುರಿತು ಡಾ.ಮಹ್ಮದ್ ಫಾರೂಕ್ ಮಾಹಿತಿ ನೀಡಿದರು. ಡಾ.ವಿ.ಪಿ. ಸಿಂಗ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ದುಶ್ಯಂತ ಓಲೇಕರ್ ನಿರೂಪಣೆ ಮಾಡಿದರು. ಡಾ.ಅರುಣಕುಮಾರ ಕೆ.ಟಿ. ವಂದಿಸಿದರು. ತೋಟಗಾರಿಕೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net