ತೆಂಗಿನ ಮೌಲ್ಯವರ್ಧನೆಗೆ ಬೇಕಿದೆ ಆದ್ಯತೆ

11rajesh2
Published on

ಚಾಮರಾಜನಗರ: ಜಿಲ್ಲೆಯ ಪ್ರಮುಖವಾದ ತೋಟಗಾರಿಕೆ ಬೆಳೆಯಲ್ಲಿ ತೆಂಗು ಕೂಡ ಒಂದಾಗಿದ್ದು, ಎಳನೀರು, ತೆಂಗಿನಕಾಯಿ ಹಾಗೂ ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ.

ಜಿಲ್ಲೆಯ ತೋಟಗಾರಿಕೆ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಚಾಮರಾಜನಗರ ತಾಲೂಕಿನ ವ್ಯಾಪ್ತಿಯಲ್ಲಿ 7935 ಹೆಕ್ಟೇರ್, ಯಳಂದೂರು 1221, ಗುಂಡ್ಲುಪೇಟೆ 1684, ಕೊಳ್ಳೇಗಾಲ ಮತ್ತು ಹನೂರು ತಾಲೂಕಿನ ವ್ಯಾಪ್ತಿಯಲ್ಲಿ 1231 ಹೆಕ್ಟೇರ್ ವ್ಯಾಪ್ತಿಯಲ್ಲಿ ತೆಂಗುಬೆಳೆ ಇದ್ದು, ಒಟ್ಟಾರೆ ಅಂದಾಜು 13,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ತೆಂಗನ್ನು ಬೆಳೆದಿದ್ದಾರೆ. ತೆಂಗಿನ ಬೆಳೆ ವಿಸ್ತರಣೆ ಹಾಗೂ ಮೌಲ್ಯವರ್ಧನೆಗೆ ಇಲಾಖೆ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಅದಾಗ್ಯೂ ತೆಂಗುಬೆಳೆಗಾರರು ಹಲವಾರು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತೆಂಗುಬೆಳೆಗಾರರು ಒಟ್ಟುಗೂಡಿ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘವನ್ನು ಸ್ಥಾಪಿಸಿ ತೆಂಗು ಮೌಲ್ಯವರ್ಧನೆಗೆ ಸಹಕಾರ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ರೈತರು ಬೆಳೆಯುತ್ತಿರುವ ಎಳನೀರು ಮತ್ತು ತೆಂಗಿನಕಾಯಿಗೆ ಸೂಕ್ತ ರೀತಿಯ ಮಾರುಕಟ್ಟೆ ಹಾಗೂ ಸಂಸ್ಕರಣೆಗೆ ಸೂಕ್ತ ವ್ಯವಸ್ಥೆ ಇಲ್ಲದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ತೆಂಗಿನಿಂದ ಸುಮಾರು 30 ಕ್ಕಿಂತಲೂ ಹೆಚ್ಚು ಉಪಉತ್ಪನ್ನಗಳನ್ನು ತಯಾರಿಸಬಹುದಾಗಿದ್ದು, ಈ ಮೂಲಕ ರೈತರು ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಈ ದೃಷ್ಟಿಯಲ್ಲಿ ಸರ್ಕಾರ ಮತ್ತು ತೋಟಗಾರಿಕೆ ಇಲಾಖೆ ತೆಂಗಿನ ಮೌಲ್ಯವರ್ಧನೆಗೆ ನೆರವಾಗುವ ನಿಟ್ಟಿನಲ್ಲಿ ವಿಶೇಷವಾಗಿ ಒತ್ತು ನೀಡಬೇಕಿದೆ. ಈ ಮೂಲಕ ತೆಂಗು ಬೆಳೆಗಾರರಿಗೆ ಸೂಕ್ತ ರೀತಿಯಲ್ಲಿ ಸಹಕಾರ ನೀಡಬೇಕಿದೆ. ಈ ನಿಟ್ಟಿನಲ್ಲಿ ತೆಂಗು ಬೆಳೆಗಾರರು, ರೈತ ಮುಖಂಡರು ಹಾಗೂ ಅಧಿಕಾರಿಗಳ ಅಭಿಪ್ರಾಯಗಳನ್ನು ಈ ವಾರದ ಲೌಡ್‌ಸ್ಪೀಕರ್‌ನಲ್ಲಿ ಸಂಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net