ತೆಂಗಿನ ಚಿಪ್ಪು, ಮಟ್ಟೆ ಬೆಲೆ 3 ಪಟ್ಟು ಹೆಚ್ಚಳ ; 1 ಸಾವಿರ ಚಿಪ್ಪಿಗೆ 1900-1950 ರೂ., ಮಟ್ಟೆಗೆ 900-1000 ರೂ.,

raw-coconut-shell-500x500
Published on

ತುಮಕೂರು : ತೆಂಗಿನ ಚಿಪ್ಪು ಹಾಗೂ ಮಟ್ಟೆ ಬೆಲೆ ಗಗನಮುಖಿಯಾಗಿದೆ. 1 ಸಾವಿರ ಚಿಪ್ಪು ಹಾಗೂ ಮಟ್ಟೆಗೆ ಮೂರುಪಟ್ಟು ಬೆಲೆ ಹೆಚ್ಚಳವಾಗಿದ್ದು, ಸಹಜವಾಗಿ ತೆಂಗುಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕೊಬ್ಬರಿ ಬೆಲೆ ಕೂಡ ಕ್ವಿಂಟಾಲ್‌ಗೆ 16 ಸಾವಿರ ದಾಟಿದ್ದು ಈ ಖುಷಿಯ ಜತೆಗೆ ಚಿಪ್ಪು, ಮಟ್ಟೆ ಬೆಲೆ ಕೂಡ ಹೆಚ್ಚಿರುವುದು ಡಬಲ್ ಧಮಾಕ ಎನಿಸಿದೆ.

ರಾಜ್ಯದ ತೆಂಗು ಬೆಳೆಯಲಿರುವ 16 ಜಿಲ್ಲೆಗಳಲ್ಲಿ ತುಮಕೂರು ಜಿಲ್ಲೆ ನಂ.1 ಸ್ಥಾನದಲ್ಲಿದೆ. ಇನ್ನೂ ತಿಪಟೂರು ಕೊಬ್ಬರಿಗೆ ಉತ್ತರಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಅಲ್ಲದೆ, ತೆಂಗು ನಾರಿನ ಉತ್ಪನ್ನ ಹಾಗೂ ಆಕ್ಟಿವೇಟೆಡ್ ಚಾರ್ಕೋಲ್‌ಗೆ (ಚಿಪ್ಪು ಸುಟ್ಟಿ ತಯಾರಿಸುವ ಇದ್ದಿಲು) ಹೆಚ್ಚು ಬೇಡಿಕೆ ಇರುವ ಹಿನ್ನೆಲೆಯಲ್ಲಿ ತೆಂಗಿನ ಚಿಪ್ಪು ಹಾಗೂ ಮಟ್ಟೆ ಬೆಲೆ ಈ ವರ್ಷ ಮೂರು ಪಟ್ಟು ಹೆಚ್ಚಳವಾಗಿದೆ. ಕಳೆದ ವರ್ಷ 1 ಸಾವಿರ ಮಟ್ಟೆಗೆ 250 ರೂ., ಇತ್ತು. 900-950 ರೂ.,ಗೆ ಹೆಚ್ಚಳವಾಗಿದೆ. ಇನ್ನೂ ಚಿಪ್ಪು 1 ಸಾವಿರಕ್ಕೆ 600-700 ರೂ., ನಿಂದ ಈಗ 1900-1950 ರೂ.ಗೆ ಏರುಮುಖ ಕಂಡಿದೆ.

ತಮಿಳುನಾಡಿನಲ್ಲಿ ಡಿಮ್ಯಾಂಡ್: ರಾಜ್ಯದ ತೆಂಗಿನ ಮಟ್ಟೆಗೆ ತಮಿಳುನಾಡಿನಲ್ಲಿ ಹೆಚ್ಚಿನ ಡಿಮಾಂಡ್ ಇದೆ. ಅದರಲ್ಲೂ ಜಿಲ್ಲೆಯಿಂದ ಪ್ರತಿನಿತ್ಯ 100ಕ್ಕೂ ಹೆಚ್ಚು ಲಾರಿಗಳಲ್ಲಿ ಮಟ್ಟೆ ತುಂಬಿಕೊಂಡು ಹೋಗಲಾಗುತ್ತದೆ. ತೆಂಗಿನ ಮಟ್ಟೆ ಸಂಸ್ಕರಿಸಿ ನಾರನ್ನು ಬೇರ್ಪಡಿಸಿ ಅದರಿಂದ ಉಪಉತ್ಪನ್ನ ತಯಾರಿಸುವ ದೊಡ್ಡ ಕೈಗಾರಿಕಾ ಘಟಕಗಳು ತಮಿಳುನಾಡಿನಲ್ಲಿದ್ದು ಇಲ್ಲಿನ ಕಚ್ಛಾವಸ್ತುಗಳಿಗೆ ಬೇಡಿಕೆ ಬಂದಿದೆ.

ಹಾಗಾಗಿ, ಜಿಲ್ಲೆಯಲ್ಲಿ ತೆಂಗಿನ ನಾರಿನ ಕುಶಲ ಕೈಗಾರಿಕಾ ಸಹಕಾರ ಸಂಘ ವ್ಯಾಪ್ತಿಯಲ್ಲಿನ 30ಕ್ಕೂ ಹೆಚ್ಚು ತೆಂಗಿನ ನಾರಿನ ಉತ್ಪನ್ನಗಳ ಕೈಗಾರಿಕೆಗಳು ಒಂದೊಂದೆ ರೋಗಗ್ರಸ್ತವಾಗುತ್ತಿವೆ. ತಿಪಟೂರು-10, ಗುಬ್ಬಿ -10, ತುರುವೇಕೆರೆ-8, ಗುಬ್ಬಿ-7, ತುಮಕೂರು ತಾಲೂಕು-5 ಕ್ಕೂ ಹೆಚ್ಚು ತೆಂಗಿನ ನಾರಿನ ಉತ್ಪನ್ನ ಘಟಕಗಳಿದ್ದು ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಕುಂಟುತ್ತಾ ಸಾಗಿವೆ.

ಇನ್ನೂ ತೆಂಗಿನ ಚಿಪ್ಪಿಗೆ ಹೆಚ್ಚು ಬೇಡಿಕೆ ಇದೆ. ಚಿಪ್ಪಿನ ಇದ್ದಿಲು ತಯಾರಿಸಿ ಸೌಂದರ್ಯ ವರ್ದಕ ತಯಾರಿಸುವ ಕಂಪನಿಗಳಿಗೆ ಹಾಗೂ ವಾಟರ್ ಫ್ಯೂರಿಫೈರ್‌ಗೆ ಬಳಸಲು ಆಕ್ಟಿವೇಟೆಡ್ ಚಾರ್‌ಕೋಲ್ ಪೂರೈಸಲಾಗುವುದರಿಂದ ಚಿಪ್ಪಿಗೆ 1 ಸಾವಿರಕ್ಕೆ 2000 ರೂ., ವರೆಗೆ ಬೆಲೆ ಮುಟ್ಟಲಿದೆ. ತೆಂಗುಬೆಳೆಗಾರರಿಂದ 1900-1950 ರೂ., ದರ ನೀಡಿ ಚಿಪ್ಪು ಖರೀದಿಸಲಾಗುತ್ತಿದ್ದು, ಮೂರು ಪಟ್ಟು ಬೆಲೆ ಹೆಚ್ಚಳವಾಗಿದೆ.

ತಮಿಳುನಾಡಲ್ಲಿ ತೆಂಗಿನ ನಾರಿನ ಘಟಕ: ತೆಂಗಿನ ಮಟ್ಟೆಯಿಂದ ನಾರನ್ನು ಬೇರ್ಪಡಿಸಿ ಹಗ್ಗ, ನಾರು, ಕುರ್ಚಿ, ಮೇಜು, ಮಂಚ, ಪ್ಯಾನಲ್, ಮ್ಯಾಟ್ ಮುಂತಾದ ವಸ್ತುಗಳನ್ನು ತಯಾರಿಸಬಹುದಾಗಿದೆ. ತಮಿಳುನಾಡಿನಲ್ಲಿ ದೊಡ್ಡ ದೊಡ್ಡ ತೆಂಗಿನ ನಾರಿನ ಘಟಕಗಳಿದ್ದು ರಾಜ್ಯದ ತೆಂಗು ನಾರು ಉತ್ಪನ್ನಗಳ ಘಟಕಗಳು ಪೈಪೋಟಿ ನೀಡದೆ ಸೋತಿವೆ. ಹಾಗಾಗಿ, ಮಟ್ಟೆಗೆ ಹೆಚ್ಚಿನ ಬೆಲೆ, ಬೇಡಿಕೆ ತಮಿಳುನಾಡಿನಿಂದ ಬಂದಿದೆ. ಮಟ್ಟೆಯ ಹೊಟ್ಟಿಗೂ ಉತ್ತಮ ಬೇಡಿಕೆ ಇದೆ. ನರ್ಸರಿಗಳಲ್ಲಿ ಗಿಡಗಳನ್ನು ಬೆಳೆಸಲು ತೆಂಗಿನ ಮಟ್ಟೆಯ ಹೊಟ್ಟು ಬಳಸಲಾಗುತ್ತಿದೆ. ಜಿಲ್ಲೆ ಸೇರಿ ಹೊರರಾಜ್ಯಗಳಲ್ಲಿಯು ಬೇಡಿಕೆ ಇದೆ. ಮಟ್ಟೆ ಬೆಲೆ ಏರಲು ಇದು ಸಹ ಪ್ರಮುಖ ಕಾರಣ.

ಕಳೆದ ವರ್ಷ 1 ಸಾವಿರ ಮಟ್ಟೆಗೆ 250 ರೂ., ಚಿಪ್ಪಿಗೆ 600 ರೂ., ಇತ್ತು. ಈ ಬಾರಿ ಮಟ್ಟೆಗೆ 900 ರೂ., ಚಿಪ್ಪನ್ನು 1900 ರೂ., ವರೆಗೆ ಕೊಟ್ಟಿದ್ದೇವೆ. ನಮ್ಮ ತೋಟಕ್ಕೆ ಬಂದು ಮಟ್ಟೆ ಮತ್ತು ಚಿಪ್ಪು ಖರೀದಿಸಿಕೊಂಡು ಹೋಗುತ್ತಾರೆ. ಕೊಬ್ಬರಿ ಜತೆ ಚಿಪ್ಪು, ಮಟ್ಟೆಗು ಹೆಚ್ಚು ಬೆಲೆ ಸಿಕ್ಕಿರುವುದು ನಿಜಕ್ಕೂ ಸದಾ ಸಂಕಷ್ಟದಲ್ಲಿರುತ್ತಿದ್ದ ತೆಂಗುಬೆಳೆಗಾರರಿಗೆ ಖುಷಿ ತಂದಿದೆ. ಟಿ.ಎಸ್.ನಿರಂಂಜನ್ ತೆಂಗುಬೆಳೆಗಾರರು ತಮಿಳುನಾಡಿನ ತೆಂಗು ನಾರಿನ ಉತ್ಪನ್ನ ಘಟಕಗಳಿಗೆ ನಾವು ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. 10 ವರ್ಷಗಳ ಹಿಂದೆ ತೆಂಗಿನ ನಾರಿಗೆ ಇದ್ದ ಬೆಲೆಯೇ ಇವತ್ತು ಅಷ್ಟೇ ಇದೆ. ಅವತ್ತು 1 ಸಾವಿರ ಮಟ್ಟೆಗೆ 50 ರೂ., ಇತ್ತು. ಇವತ್ತು 1 ಸಾವಿರ ರೂ., ತಲುಪಿದೆ. ತಮಿಳುನಾಡು ಘಟಕಗಳಿಗೆ ಜಿಲ್ಲೆಯಿಂದ ಮಟ್ಟೆ ಪೂರೈಕೆಯಾಗುತ್ತಿದೆ. ನಮ್ಮಲ್ಲಿ ಉದ್ಯೋಗ ಕಡಿತದ ಜತೆ ನಮ್ಮ ಘಟಕಗಳು ಮುಚ್ಚುವ ಭೀತಿ ಇದೆ. ಮಟ್ಟೆ ತುಂಬಿಕೊಂಡು ಹೋಗುವ ತಮಿಳುನಾಡು ಲಾರಿಗಳಿಗೆ ಪ್ರವೇಶ ತೆರಿಗೆ ವಿಧಿಸಬೇಕು. ಟಿ.ಎಸ್.ಕಿಡಿಗೆಣ್ಣಪ್ಪ ಅಧ್ಯಕ್ಷ, ತೆಂಗಿನ ನಾರಿನ ಕುಶಲ ಕೈಗಾರಿಕಾ ಸಹಕಾರ ಸಂಘ ಗುಬ್ಬಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net