

ಕೊಳ್ಳೇಗಾಲ: ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ತೆಂಗು ಬೆಳೆಯಲ್ಲಿ ರೂಗೊಸ್ ಬಿಳಿ ನೊಣದ ಬಾಧೆ ಮತ್ತು ನಿರ್ವಹಣೆ ಕ್ಷೇತ್ರೋತ್ಸವ ಗಮನ ಸೆಳೆಯಿತು.
ಕಾರ್ಯಕ್ರಮಕ್ಕೆ ತೋಟಗಾರಿಕೆ ತಜ್ಞ ಡಾ.ಮೋಹನ್ ಚಾಲನೆ ನೀಡಿ ಮಾತನಾಡಿ, ತೆಂಗು ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಅಗತ್ಯ ವೈಜ್ಞಾನಿಕ ತಾಂತ್ರಿಕ ಕ್ರಮ ಅನುಸರಿಸಬೇಕಿದೆ. ಅದರಲ್ಲಿ ಉತ್ತಮ ತಳಿಗಳ ಬಳಕೆ ಪ್ರಾಮುಖವಾಗಿದೆ. ಪ್ರತಿ ಗಿಡಗಳ ನಡುವೆ ಅಂತರ ಹಾಗೂ ಗೊಬ್ಬರ ಬಳಕೆ ಸಕಾಲಕ್ಕೆ ನೀಡಬೇಕು. ನೀರಿನ ಸದ್ಭಳಕೆ ಸೂಕ್ತವಾಗಿರಬೇಕು ಎಂದು ಸಲಹೆ ನೀಡಿದರು.
ಸಸ್ಯರೋಗ ತಜ್ಞ ಡಾ.ಪೊಂಪನಗೌಡ ಮಾತನಾಡಿ, ಈ ಜಿಲ್ಲೆಗೆ ತೆಂಗಿನ ಬೆಳೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ರೈತರು ತೆಂಗು ಬೆಳೆಗೆ ಆದ್ಯತೆ ಕೊಡಬೇಕಿದೆ. ಲೋಕಲ್ ತೆಂಗು ತಳಿಗಳನ್ನೇ ಬೆಳೆಯಲು ಮಹತ್ವ ನೀಡಬೇಕು. ಸಗಣಿ ಗೊಬ್ಬರ ಬಳಕೆ ಮತ್ತು ಅದರ ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಭಾಸ್ಕರ್, ಸಹಾಯಕ ನಿರ್ದೇಶಕಿ ಜೀವಿತಾ, ಸಿಬ್ಬಂದಿ ಹಾಗೂ ರೈತರು ಹಾಜರಿದ್ದರು.