ತುಳಿದರೆಂದು ಚಿಂತಿಸದಿರಿ, ಹುಲ್ಲಿನಂತೆ ಬೆಳೆಯಿರಿ

Siddeshwar swaiji Pravachana
Published on

ನಿಸರ್ಗ ದೇವತೆ ನೀಡಿರುವ ಈ ಬದುಕು ಅದ್ಭುತ. ನಿಸರ್ಗ ನೀಡಿರುವ ವಸ್ತುವಿನ ಬೆಲೆ ಕಟ್ಟಬಹುದು. ಬದುಕಿಗೆ ಬೆಲೆ ಕಟ್ಟಲು ಸಾಧ್ಯವೆ? ಈ ಬದುಕನ್ನು ಸುಂದರಗೊಳಿಸಲು ಭಾವ, ಛಲ, ನಿಸರ್ಗ, ಗುರು ಬೇಕು.

ಭಾವ ಸುಂದರ, ಅಂದರೆ ಮನಸು ಸ್ವಚ್ಛ ಇದ್ದರೆ ಏನಾದರೂ ಸಾಧಿಸಬಹುದು.

ಕಥೆಯೊಂದು ನೆನಪಾಗುತ್ತದೆ. ಇರುವೆ ಓಡುತ್ತಿತ್ತು. ಹಾದಿಯಲ್ಲಿ ಹೋಗುತ್ತಿದ್ದ ಮನುಷ್ಯ ಅದನ್ನು ಕೇಳಿದ. ‘ಎಲ್ಲಿಗೆ ಹೋಗುತ್ತಿದ್ದೀಯಾ?’. ಇರುವೆ ಹೇಳಿತು, ‘ನಾನು ಹಿಮಾಲಯ ಬೆಟ್ಟ ಏರಲು ಹೊರಟಿರುವೆ’ ಅಂತ. ಮನುಷ್ಯ ಕೇಳಿದ, ‘ನೀನು ಈ ಬೆಟ್ಟವನ್ನು ಏರಲು ಸಾಧ್ಯವೆ?’

ಇರುವೆ ಹೇಳಿತು, ‘ನೀವು ಮಾನವರು ಹಣ, ಆಸ್ತಿ ಗಳಿಸಲು ಕನಸು ಕಾಣುತ್ತೀರಿ. ನಾನು ಹಿಮಾಲಯ ಏರುವ ಕನಸು ಕಾಣುತ್ತೇನೆ. ನಿಮಗೂ ನಮಗೂ ವ್ಯತ್ಯಾಸ ಅಷ್ಟೇ’ ಎಂದಿತು. ಸಾಧನೆ ಮಾಡುತ್ತಿರುವ ಇರುವೆ ನಮಗೆ ನಿಸರ್ಗ ಗುರು.

ಹುಲ್ಲು ಬೆಳೆಯಬೇಕು ಅನ್ನುವಾಗ ಅದನ್ನು ತುಳಿಯತ್ತಿದ್ದರು. ಗಿಡದ ಮೇಲೆ ಕುಳಿತ ಪಕ್ಷಿ ಹೇಳಿತು, ‘ನಿನ್ನನ್ನು ಎಲ್ಲರೂ ತುಳಿಯುತ್ತಾರೆ, ಏಕೆ ಬೆಳೆಯಬೇಕು ಎಂದುಕೊಳ್ಳುತ್ತೀಯಾ?’

ಹುಲ್ಲು ಹೇಳಿತು, ‘ನಾವು ಇರುವುದೇ ಬೆಳೆಯೋಕೆ. ಸಾವಿರಾರು ಜನ ತುಳಿಯುತ್ತ ಹೋಗುತ್ತಾರೆ. ನಾವು ಇಲ್ಲೇ ಇರುವವರು. ನಮ್ಮ ಕೆಲಸ ಬೆಳೆಯುವುದು. ನಮ್ಮನ್ನು ಯಾರೂ ತಡೆಯಲಾಗದು’. ಮನುಷ್ಯರೇ, ಯಾರಾದರೂ ನಿಮ್ಮನ್ನು ತುಳಿದರೆ ಚಿಂತೆ ಮಾಡುವುದಲ್ಲ. ಮತ್ತೆ ಹುಲ್ಲಿನಂತೆ ಬೆಳೆಯಬೇಕು. ನಿಸರ್ಗ ದೇವರು ನಮಗೆ ಗುರು.

ಒಬ್ಬ ಬಾಲಕ ನಮಗೆ ಬುದ್ಧಿ ಹೇಳಿದರೆ ಅವನೇ ನಮಗೆ ಗುರು. ಒಳ್ಳೆಯ ಮಾತು ಹೇಳುವವರೇ ಗುರು. ನಿಸರ್ಗದಲ್ಲಿ ಬಹಳಷ್ಟು ಕಲಿಯವುದು ಇದೆ.

ಮನುಷ್ಯರೇ, ಭಗವಂತ ನಮಗೆ ಶಕ್ತಿ ನೀಡಿದ್ದಾನೆ. ಬುದ್ಧಿ ನೀಡಿದ್ದಾನೆ. ಬಿದ್ದರೂ ಏಳಬೇಕು. ಎದ್ದು ಮುನ್ನಡೆಯಬೇಕು.

ವಿಮಾನ ಕಂಡುಹಿಡಿದವರು ಒಮ್ಮೆಲೇ ಏರಲಿಲ್ಲ. ಪ್ರಾರಂಭದಲ್ಲಿ ಕೆಳಗಡೆ ಬಿತ್ತು. ಮತ್ತೇ ಮತ್ತೆ ಪ್ರಯತ್ನಿಸಿ ಯಶಸ್ವಿಯಾದರು. ಅದು ಛಲ. ಸಾಧನೆಗೆ ಸ್ವಚ್ಛ ಮನಸು ಬೇಕು. ಛಲವೂ ಬೇಕು.

ನಿಸರ್ಗವೇ ನಮಗೆ ಗುರು: ಒಂದು ಗುರುಕುಲ. ಅಲ್ಲಿ ವಿದ್ಯಾಭ್ಯಾಸ ಮುಗಿಸಿದ ಮಕ್ಕಳನ್ನು ಗುರುಗಳು ಮನೆಗೆ ಕಳುಹಿಸಿದರು. ಅದರಲ್ಲಿ ಒಬ್ಬ ಹುಡುಗನನ್ನು ಗುರುಗಳು ಮೂರ್ನಾಲ್ಕು ವರ್ಷ ಕಳಿಸಲಿಲ್ಲ. ಆತ ಕೇಳಿದ, ‘ನನ್ನನ್ನೇಕೆ ಕಳುಹಿಸುತ್ತಿಲ್ಲ ಗುರುಗಳೆ?’

ಗುರು ಹೇಳಿದ, ‘ನಿನ್ನ ವಿದ್ಯಾಭ್ಯಾಸ ಇನ್ನೂ ಮುಗಿದಿಲ್ಲ, ಇಲ್ಲೇ ಇರು.’

ಬಾಲಕ ಯೋಚಿಸಿದ, ‘ನಾನು ದಡ್ಡ. ನನ್ನನ್ನು ಇವರು ಬಿಡುವುದಿಲ್ಲ. ನಾನೇ ಹೋಗಿಬಿಡುವುದು ಒಳ್ಳೆಯದು’ ಅಂತ. ಗುರುಕುಲ ಬಿಟ್ಟು ಹೊರಟ ಅವನಿಗೆ ದಾರಿಯಲ್ಲಿ ನೀರಡಿಕೆಯಾಯಿತು. ಅಲ್ಲೇ ಒಂದು ಬಾವಿ ಇತ್ತು. ಒಬ್ಬಾತ ಹಗ್ಗ ಕಟ್ಟಿ ಮಣ್ಣಿನ ಕೊಡದಿಂದ ನೀರು ಜಗ್ಗುತ್ತಿದ್ದ. ಓಡಿ ಬಂದ ಬಾಲಕನನ್ನು ಆತ ಮಾತನಾಡಿಸಿದ. ಬಾಲಕ ತಾನು ಗುರುಕುಲ ಬಿಟ್ಟು ಬಂದ ಸಂಗತಿಯನ್ನು ಹೇಳಿದ.

ನೀರು ಸೇದುತ್ತಿದ್ದಾತ ಹೇಳಿದ, ‘ಇಲ್ಲಿ ನೋಡು. ಹಗ್ಗದಿಂದ ನೀರು ಜಗ್ಗಿ ಜಗ್ಗಿ ಕಲ್ಲು ಸವೆದು ಹರಿವು ಬಿದ್ದಿವೆ. ಮಣ್ಣಿನ ಕೊಡ ಇಟ್ಟು ಇಟ್ಟು ಕಲ್ಲು ಸವೆದು ತಗ್ಗು ಬಿದ್ದಿದೆ. ಮಣ್ಣಿನ ಬಿಂದಿಗೆ, ಹಗ್ಗದಿಂದ ಕಲ್ಲು ಸವೆಯುತ್ತದೆ ಎಂದರೆ ಅದಕ್ಕೆ ಅದರದ್ದೇ ಆದ ಸಮಯ ಬೇಕು. ನಿನಗೆ ವಿದ್ಯೆ ಹತ್ತಲು ಇನ್ನೂ ಸಮಯ ಬೇಕು. ಮರಳಿ ಗುರುಕುಲಕ್ಕೆ ಹೋಗು’ ಎಂದ.

ಆ ಬಾಲಕ ಗುರುಕುಲಕ್ಕೆ ಮರಳಿದ. ಮುಂದೆ ಆತ ಸಂತನಾದ. ನಿಸರ್ಗ ಅವನಿಗೆ ಗುರು ಆಯಿತು, ಛಲದಿಂದ ಸಂತನಾದ!

ಪರದೇಶದ ಗುರು ಹೇಳುತ್ತಾರೆ. ನಿಸರ್ಗವೇ ನಮಗೆ ಗುರು. ಅಸಾಧ್ಯ ಅನ್ನಬಾರದು. ಯಾವುದನ್ನಾದರೂ ಸಾಯುವವರೆಗೂ ಸಾಧನೆ ಮಾಡಬೇಕು. ನಿಮ್ಮಲ್ಲಿ ಯಾವ ವಿದ್ಯೆ ಇದೆಯೋ ಅದನ್ನು ಬಳಸಬೇಕು.

ನಿರೂಪಣೆ: ತುಕಾರಾಂ ಬ. ಜಾಧವ ಕನಕೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net