ತುಳಿತಕ್ಕೊಳಗಾದವರಿಗೆ ಸಹಕಾರ ಸಂಘಗಳು ನೆರವಾಗಲಿ : ಸರ್ವಸದಸ್ಯರ ಸಭೆಯಲ್ಲಿ ಬಿಜೆಪಿ ಮುಖಂಡ ಸಂತೋಷ್ ಸಲಹೆ

download
Published on


ಹಾಸನ : ತುಳಿತಕ್ಕೊಳಗಾದವರು, ಹಿಂದುಳಿದವರಿಗೆ ಧ್ವನಿಯಾಗಿ ಸಹಕಾರ ಸಂಗಳು ಕೆಲಸ ಮಾಡಲಿ ಎನ್ನುವ ಆಶಯ ನಮ್ಮದಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ತಿಳಿಸಿದರು.

ಅರಸೀಕೆರೆ ನಗರದ ವೀರಶೈವ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 24ನೇ ವರ್ಷದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಬಸವೇಶ್ವರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ 1 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು.


ಸಂಘದ ಅಧ್ಯಕ್ಷ ಕೆ.ವಿ.ನಿರ್ವಾಣಸ್ವಾಮಿ ಮಾತನಾಡಿ, ಬಸವೇಶ್ವರ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 3.01 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಹಕಾರ ಸಂಘದಲ್ಲಿ 1005 ಸದಸ್ಯರಿದ್ದು, 11.23 ಲಕ್ಷ ರೂ. ಬಂಡವಾಳ ಹಾಗೂ 1.24 ಕೋಟಿ ರೂ. ಠೇವಣಿ ಸಂಗ್ರಹ ಮಾಡುವ ಮೂಲಕ ಗಣನೀಯ ಪ್ರಗತಿ ಹೊಂದಿದೆ. ಗ್ರಾಹಕರಿಗೆ ತ್ವರಿತ ಹಾಗೂ ವಿನಯಪೂರ್ವಕ ಸೇವೆ ಜತೆಗೆ ಸದಸ್ಯರು ಹಾಗೂ ಸಾರ್ವಜನಿಕರು ಸಂಘದ ಮೇಲೆ ಇಟ್ಟ ವಿಶ್ವಾಸವೇ ಲಾಭಕ್ಕೆ ಮೂಲ ಕಾರಣವಾಗಿದೆ. ಸಂಘಕ್ಕೆ ಸ್ವಂತ ಕಟ್ಟಡ ಹೊಂದಬೇಕು ಎಂಬ ಕನಸು ಶೀಘ್ರವೇ ನನಸಾಗಲಿದ್ದು, ನ.6ರಂದು ಬಾಳೇ ಹೊನ್ನೂರು ಶಾಖಾ ಮಠ ನುಗ್ಗೇಹಳ್ಳಿ ಮಠದ ಶ್ರೀಮಹೇಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.


ಉಪಾಧ್ಯಕ್ಷ ಶಿವಕುಮಾರ ಸ್ವಾಮಿ ಮಾತನಾಡಿ, ಸಂಘವು 40.60 ಲಕ್ಷ ರೂ. ಸಾಲವನ್ನು ಅರ್ಹ ಸದಸ್ಯರಿಗೆ ನೀಡಿದೆ. ಈ ಪೈಕಿ 30.02 ಲಕ್ಷ ರೂ. ಪಾವತಿಯಾಗಿದ್ದು ವರ್ಷಾಂತ್ಯಕ್ಕೆ 1.05 ಲಕ್ಷ ರೂ. ಬಾಕಿ ಉಳಿದಿದೆ. ಸದಸ್ಯರು ತಾವು ಪಡೆದ ಸಾಲವನ್ನು ಸಕಾಲಕ್ಕೆ ಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರಿಯಾಗಬೇಕೆಂದು ಮನವಿ ಮಾಡಿದರು.
ನಿರ್ದೇಶಕರಾದ ಒ.ಜಿ.ಗೀತಾ, ಎಂ.ಜಿ.ಶಿಲ್ಪಾ ಸತೀಶ್, ತಿಪ್ಪೇಸ್ವಾಮಿ ಮಂಜುನಾಥ್ ಜವಳಿ, ಪ್ರವೀಣ್ ಕುಮಾರ್ ಈರಯ್ಯ, ಬಿ.ಎನ್ ರೇಣುಕಾಪ್ರಸಾದ್, ಎಚ್.ಟಿ.ಕುಮಾರಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net