ತುಳಿತಕ್ಕೊಳಗಾದವರ ಪರ ದನಿ ಎತ್ತಿದ ಹಡಪದ ಅಪ್ಪಣ್ಣ

7
Published on

ಮೈಸೂರು: ಹನ್ನೆರಡನೇ ಶತಮಾನದಲ್ಲಿ ಮಹಿಳೆ ಹಾಗೂ ಸಮಾಜದಲ್ಲಿ ತುಳಿತಕ್ಕೊಳಗಾದವರ ಪರ ತಮ್ಮ ವಚನಗಳ ಮೂಲಕ ದನಿ ಎತ್ತಿದ ಶಿವಶರಣರಲ್ಲಿ ಹಡಪದ ಅಪ್ಪಣ್ಣ ಪ್ರಮುಖರು ಎಂದು ಮೇಯರ್ ಶಿವಕುಮಾರ್ ಅಭಿಪ್ರಾಯಪಟ್ಟರು.


ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಸಮಿತಿ ಸಹಯೋಗದೊಂದಿಗೆ ಕಿರುರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಡಪದ ಅಪ್ಪಣ್ಣ ಅವರು ಬಸವಣ್ಣನಿಗೆ ಪ್ರೀತಿ ಪಾತ್ರರಾಗಿದ್ದರು. ಅವರ ವಿಚಾರಗಳಿಗೆ ಬಸವಣ್ಣ ಮನ್ನಣೆ ನೀಡುತ್ತಿದ್ದರು. ಬಸವಣ್ಣನವರಿಗೆ ಸ್ನೇಹಿತ ಹಾಗೂ ಮಾರ್ಗದರ್ಶಕರಾಗಿದ್ದ ನಿಜಯೋಗಿ ಅಪ್ಪಣ್ಣ ಅವರ ಬದುಕು ಮತ್ತು ವಚನಗಳು ಇಂದಿಗೂ ಆದರ್ಶ ಎಂದರು.


ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಹಡಪದ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಕಟಿಂಗ್ ಶಾಪ್ ತೆರೆಯಲು, ಉಪಕರಣಗಳನ್ನು ಖರೀದಿಸಲು ಹಾಗೂ ಮಂಗಳವಾದ್ಯ ನುಡಿಸುವವರಿಗೆ 10 ಸಾವಿರ ರೂ. ಪ್ರೋತ್ಸಾಹಧನವನ್ನು ಪ್ರಸಕ್ತ ಪಾಲಿಕೆಯ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರು ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಮಾತನಾಡಿ, ಹಡಪದ ಅಪ್ಪಣ್ಣನ ತಂದೆ ಚನ್ನಬಸಪ್ಪ, ತಾಯಿ ದೇವಮ್ಮ. ಇವರು ಬಸವನ ಬಾಗೇವಾಡಿಯ ಮೊಸಬಿನ್ನಾಳ ಗ್ರಾಮದವರು. ಇವರ ಹೆಂಡತಿ ಲಿಂಗಮ್ಮ ಕೂಡ ವಚನಗಾರ್ತಿ. ಹಡಪದ ಅಪ್ಪಣ್ಣನ ಸಾತ್ವಿಕ ಸಾಧನೆಗೆ ಇವರೇ ಮೂಲ ಕಾರಣ ಎಂದು ತಿಳಿಸಿದರು.


ಸಮಾಜದ ಕೆಳಸ್ತರದಲ್ಲಿದ್ದ ಹಡಪದ ಅಪ್ಪಣ್ಣರನ್ನು ಆತ್ಮೀಯರಾಗಿ ಬಸವಣ್ಣಕಂಡಿದ್ದರು. ತಾರತಮ್ಯ ಹಾಗೂ ಮೌಢ್ಯವನ್ನು ಹೋಗಲಾಡಿಸಲು ಅಪ್ಪಣ್ಣಅವರನ್ನು ಕಂಡ ಬಳಿಕವೇ ನನ್ನನ್ನು ಭೇಟಿ ಮಾಡಲು ಅವಕಾಶ ಎಂದು ಮೌಖಿಕ ಆದೇಶ ಹೊರಡಿಸಿದ್ದರು. ಹಡಪದ ಅಪ್ಪಣ್ಣ ಬದುಕಿದಂತೆ ಬರೆದರು, ಬರೆದಂತೆಯೇ ಬದುಕಿದರು. ಅವರ 251 ವಚನಗಳು ಹಾಗೂ ಲಿಂಗಮ್ಮ ಅವರ 135 ವಚನಗಳು ದೊರಕಿವೆ ಎಂದರು.


ಕಳ್ಳನಲ್ಲೂ ಕೂಡಲಸಂಗಮನ ಕಂಡವರು ಬಸವಣ್ಣ. ಇಂತಹ ಶ್ರೇಷ್ಠ ಶರಣರಿಂದ ಗೌರವಕ್ಕೆ ಪಾತ್ರರಾದವರು ಹಡಪದ ಅಪ್ಪಣ್ಣ. ಅಪ್ಪಣ್ಣ ಒಪ್ಪಿದರೆ ಕಲ್ಲೂ ಕೂಡ ಶಿವನೇ ಎಂಬ ಬಸವಣ್ಣನ ಮಾತು ಅಪ್ಪಣ್ಣನ ಮೇಲಿದ್ದ ಗೌರವವನ್ನು ಬಿಂಬಿಸುತ್ತದೆ. ಬಸವಣ್ಣನ ಸಾಧನೆ ಹಾಗೂ ಸಿದ್ಧಿಪಥದಲ್ಲಿ ಹಡಪದ ಅಪ್ಪಣ್ಣ ಬದುಕಿದರು. ಕಾಯಕಕ್ಕೆ ಯಾವುದೇ ಜಾತಿ ಇಲ್ಲ. ಯಾವ ಕಾಯಕವೂ ಮೇಲು ಅಥವಾ ಕೀಳಲ್ಲ. ಬದಲಾಗಿ ಕಾಯಕ ಧರ್ಮ ಮುಖ್ಯ ಎಂಬುದನ್ನು ಅವರ ವಚನಗಳ ಮೂಲಕ ಸಾರಿದರು. ಹಡಪದ ಎಂದರೆ ಗುಂಪಿನ ನಾಯಕ ಎಂದರ್ಥ ಎಂದರು.


ಉಪಮೇಯರ್ ಡಾ.ಜಿ.ರೂಪಾ, ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಜೆ.ಗೋವಿಂದರಾಜು, ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net