

ಹೊಸನಗರ: ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಭಾಗವಾಗಿ ಹೊಸನಗರ ಸಿಪಿಐ ಮುತ್ತನಗೌಡ, ಪಿಎಸ್‌ಐ ಶಂಕರ್ ಗೌಡ ಪಾಟೀಲ್ ಹೊಸನಗರ ಠಾಣಾ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಮಾಹಿತಿ ನೀಡಿದರು. ಮನೆ ಮನೆಗೆ ತೆರಳಿ ಕರಪತ್ರ ಹಂಚಿದರು.
ಮುತ್ತನಗೌಡ ಮಾತನಾಡಿ, ನಿಮ್ಮ ನೆರೆಹೊರೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದರೆ, ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ ಆ ಮಾಹಿತಿಗಳನ್ನು ಪೊಲೀಸರ ಬಳಿ ಹಂಚಿಕೊಳ್ಳಬಹುದು. ಜತೆಗೆ ಯಾವುದೇ ತುರ್ತು ಸಂದರ್ಭಗಳಲ್ಲಿ ನೀವು ಪೊಲೀಸ್ ಇಲಾಖೆ ಸಹಾಯ ಪಡೆಯಬಹುದು ಎಂದರು.
ಜನರೊಂದಿಗೆ ಸಮನ್ವಯ ಸಾಸಲು ಮನೆಮನೆಗೆ ಪೊಲೀಸ್ ಉತ್ತಮ ಕಾರ್ಯಕ್ರಮ. ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಇರುವ ಅಭಿಪ್ರಾಯ ಉತ್ತಮಪಡಿಸಲು ಈ ಕಾರ್ಯಕ್ರಮ ಅನುಕೂಲವಾಗಿದೆ. ಜನಸಾಮಾನ್ಯರು ಕಷ್ಟದ ಸಮಯದಲ್ಲಿ ಬಳಸಬಹುದಾದ ತುರ್ತು ಕರೆಗಳ ಬಗ್ಗೆಯೂ ಈ ಸಂದರ್ಭ ನಿವಾಸಿಗಳಿಗೆ ಮಾಹಿತಿ ನೀಡಿದರು. ಗ್ರಾಮದ ನಿವಾಸಿ ವೀರೇಶ ಮತ್ತಿತರರಿದ್ದರು.