

ಸೋಮವಾರಪೇಟೆ: ತುರ್ತು ಸಂದರ್ಭಗಳಲ್ಲಿ ಜನರಿಗೆ ನೆರವಾಗಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತರಬೇತಿ ಹೊಂದಿದ ಶೌರ್ಯತಂಡವನ್ನು ರಚಿಸಿದ್ದು, ಅದರ ನೆರವನ್ನು ಪಡೆಯಬಹುದು ಎಂದು ತಾಲೂಕು ಯೋಜನಾಧಿಕಾರಿ ರೋಹಿತ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ತಂಡವನ್ನು ಪರಿಚಯ ಮಾಡಿಕೊಟ್ಟು ಮಾಹಿತಿ ನೀಡಿದರು.
ವಾಸಿಸುವ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಅಪಘಾತ ಸೇರಿದಂತೆ ತೊಂದರೆಗೆ ಒಳಗಾದವರ ನೆರವು ಸಿಗಬೇಕೆಂಬ ಉದ್ದೇಶದಿಂದ ಶ್ರೀ ವೀರೇಂದ್ರ ಹೆಗ್ಗಡೆ ಅವರ ಅಭಿಲಾಷೆಯಂತೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶೌರ್ಯ ವಿಪತ್ತು ನಿರ್ವಹಣಾ ತಂಡವನ್ನು ರಚಿಸಿ ತರಬೇತಿ ನೀಡಲಾಗಿದೆ. ಈ ತಂಡದಲ್ಲಿ ಈಜುಗಾರರು, ಮರ ಹತ್ತುವವರು, ಮೋಟಾರು ಚಾಲಕರು ಸೇರಿದಂತೆ ಇನ್ನಿತರ ಪರಿಣತರು ಇದ್ದಾರೆ. ಅಗತ್ಯ ಸಂದರ್ಭ ತಂಡದ ಮುಖ್ಯಸ್ಥ ರಾಮದಾಸ್ ಅವರನ್ನು 9632102124 ಸಂಪರ್ಕಿಸಬಹುದು ಎಂದರು.
ಸರ್ಕಾರಿ ಆಸ್ಪತ್ರೆ ಶಸ್ತ್ರ ಚಿಕಿತ್ಸಕರಾದ ಡಾ.ಸತೀಶ್, ತಹಸೀಲ್ದಾರ್ ಎಸ್.ಎನ್. ನರಗುಂದ ಅವರಿಗೆ ಮಾಹಿತಿ ನೀಡಲಾಯಿತು.