'ತುರ್ತು ಪರಿಸ್ಥಿತಿಯಲ್ಲಿ ಜೀವ ರಕ್ಷಿಸುವುದು ಕರ್ತವ್ಯ'

26
Published on

ಮೈಸೂರು: ಸಾಮಾನ್ಯ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಜೀವದ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್ ಹೇಳಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ನ ಜೀವರಕ್ಷಕ ಟ್ರಸ್ಟ್, ರೋಟರಿ ಮೈಸೂರು ವತಿಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು, ನಿಲಯಪಾಲಕರು, ಅಧಿಕಾರಿಗಳಿಗೆ ಜೀವ ಸುರಕ್ಷತೆಗೆ ಅಗತ್ಯ ಮೂಲಭೂತ ಜ್ಞಾನ ಕುರಿತು ಮಂಗಳವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಾಗಾರದಲ್ಲಿ ಕಲಿತದ್ದನ್ನು ನಿಮ್ಮ ಶಾಲೆಯ ಮಕ್ಕಳಿಗೆ, ಅಕ್ಕಪಕ್ಕದವರಿಗೆ ತರಬೇತಿ ನೀಡಬೇಕು. ಎಚ್.ಡಿ. ಕೋಟೆ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು ತಾಲೂಕಿನ 21 ಆಶ್ರಮ ಶಾಲೆಗಳ ಹಾಗೂ ವಿದ್ಯಾರ್ಥಿನಿಲಯಗಳ 120 ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದ್ದು, ಈ ತರಬೇತಿ ಪಡೆದವರು ಹಾಡಿ ಜನರಲ್ಲಿ ಅರಿವು ಮೂಡಿಸುವ ಮುಖಾಂತರ ಜನರ ಜೀವ ರಕ್ಷಣೆಗೆ ಸಹಕರಿಸಬೇಕು ಎಂದು ತಿಳಿಸಿದರು.
ಸಂಶೋಧನಾಧಿಕಾರಿ ಸಿ. ಶಿವಕುಮಾರ್, ರೋಟರಿ ಮೈಸೂರಿನ ಅರುಣ್ ಬೆಳವಾಡಿ, ವೈದ್ಯರಾದ ಡಾ.ರೇಖಾ, ಡಾ. ಸುಮಂತ್, ಡಾ.ದಾಕ್ಷಾಯಿಣಿ, ತಾಲೂಕು ಕಲ್ಯಾಣಾಧಿಕಾರಿಗಳಾದ ಎಚ್.ಸಿ ಬಸವರಾಜು, ಎಂ. ನಾರಾಯಣಸ್ವಾಮಿ, ನಂದಿನಿ, ಪ್ರತೀಕ್ಷ, ಅನಿಲ್, ಕೃಷ್ಣ, ಸತ್ಯರಾಜ್, ದಿವ್ಯಾ, ವಿದ್ಯಾಶ್ರೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net