

ಹಾಸನ: ಇಂದಿರಾ ಗಾಂಧಿ 1975 ಜೂ.25 ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಇಂದಿಗೆ 49 ವರ್ಷ ಪೂರ್ಣಗೊಂಡು 50ನೇ ವರ್ಷ ಆರಂಭಗೊಳ್ಳುತ್ತಿದೆ. ಈ ನೆನಪಿಗಾಗಿ, ಅಂದಿನ ಹೋರಾಟ, ಜನಾಂದೋಲನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹೇಳಿದರು.
ಪ್ರಸ್ತುತ ದಿನಗಳಲ್ಲಿ ಹೋರಾಟದ ಅರಿವೇ ಇಲ್ಲದೆ, ಹಣ, ಕುಟುಂಬ, ಜಾತಿ ಬಲದಿಂದ ರಾಜಕಾರಣಕ್ಕೆ ಬರುತ್ತಿರುವುದರಿಂದ ಜನರಪರ ಹೋರಾಟಗಾರರು ಮೂಲೆಗೆ ಸರಿಯುತ್ತಿದ್ದಾರೆ. ಆದ್ದರಿಂದ ಹೋರಾಟಗಾರರ ಬ್ಗಗೆ ಜನರಲ್ಲಿ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮ ಹಮಿಕೊಳ್ಳುವುದು ಅಗತ್ಯವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇಶದಲ್ಲಿ ಹೇರಿಕೆಯಾಗಿದ್ದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಟದ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಮಾಡಲಾಗುವುದು.ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಏಕಾಏಕಿ ಘೋಷಣೆಯಾಗಿಲ್ಲ, 1971 ರಂದು ಬಿಹಾರ ಸರ್ಕಾರ ಬಹುದೊಡ್ಡ ಭ್ರಷ್ಟಾಚಾರವನ್ನು ಮಾಡಿತ್ತು. ಅದರ ವಿರುದ್ಧ ಜಯಪ್ರಕಾಶ್ ನಾರಾಯಣ್ ಅವರು ಹೋರಾಟ ರೂಪಿಸಿದರು. ಅದು ಇಂದಿರಾ ಗಾಂಧಿ ಅವರವರೆಗೂ ವ್ಯಾಪಿಸಿತ್ತು. ಅದರ ಪ್ರತಿಫಲ 1975ರಲ್ಲಿ ನಿರ್ಣಾಯಕ ಸ್ಥಿತಿಗೆ ತಲುಪಿತು. ಆ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿ ಅವರ ಸದಸ್ಯತ್ವ ರದ್ದುಗೊಳಿಸಿತು. ಆಗ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಅಸ್ತ್ರ ಪ್ರಯೋಗ ಮಾಡಿದರು. ಆ ತಕ್ಷಣ ತುರ್ತು ಪರಿಸ್ಥಿತಿ ಹೇರಿಕೆಯಾಗಲಿಲ್ಲ, ಬಾಂಗ್ಲದೇಶ ಮತ್ತು ಭಾರತದ ನಡುವೆ ಯುದ್ಧ ನಡೆದ ಸಂದರ್ಭದಲ್ಲಿ ಹೇರಿಕೆ ಮಾಡಿ, ರದ್ದುಗೊಳಿಸದೆ ಹಾಗೆ ಉಳಿಸಿಕೊಂಡಿದ್ದರು. ಆದರೆ, 1975 ಜೂ.25ರಂದು ಅದನ್ನು ಕಾರ್ಯಗತಗೊಳಿಸಿದರು ಎಂದು ವಿವರಿಸಿದರು.
ಆ ಸಂದರ್ಭದಲ್ಲಿ ಹೋರಾಟಕ್ಕಿಳಿದ ಜಿಲ್ಲೆಯಲ್ಲಿ 280 ಜನರು, ರಾಜ್ಯದಲ್ಲಿ ಲಕ್ಷಾಂತರ ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ನಾನು ಸೇರಿದಂತೆ ಹಲವು ಜನರು ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟಿಸಿ ಜೈಲು ಸೇರಿದೆವು. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡರು, ಬಿ.ಎಸ್.ಯಡಿಯೂರಪ್ಪ ಸೇರಿ ಹಲವು ನಾಯಕರು ಜೈಲು ಸೇರಬೇಕಾಯಿತು. ಈ ಬಗ್ಗೆ ಇಂದಿನ ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಬಿಜೆಪಿ ಮುಖಂಡರ ರೇಣುಕಾನಂದ ಅವರು ಮಾತನಾಡಿ, ಜಿಲ್ಲೆಯಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹೋಗಿ ಬಂದವನ್ನು ಕಡೆಗಣಿಸಿ, ಮಂಗಳವಾರ ಬಿಜೆಪಿಯ ಕೆಲ ಮುಂಖಂಡರು ಸುದ್ದಿಗೋಷ್ಠಿ ನಡೆಸಿ, ಕಾರ್ಯಕ್ರಮ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಅವರಲ್ಲಿ ನವಿಲೆ ಅಣ್ಣಪ್ಪ ಅವರನ್ನು ಹೊರತು ಪಡಿಸಿದರೆ, ಉಳಿದವರ್ಯಾರೂ ಹುಟ್ಟೆ ಇರಲಿಲ್ಲ. ಹೋರಾಟದ ಬಗ್ಗೆ ಗೊತ್ತಿ ಇಲ್ಲದವರು, ಹೋರಾಟ ಮಾಡಿದವರನ್ನು ಕಡೆಗಣಿಸಿರುವು ಬೇಸರ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎ.ಎಸ್.ಬಸವರಾಜು, ವಿಶಾಲಾಕ್ಷಮ್ಮ, ಗಂಗಾಧರ್, ಸತ್ಯನಾರಾಯಣಗುಪ್ತಾ ಹಾಜರಿದ್ದರು.