ತುರ್ತು ಕ್ರಮಕ್ಕೆ ಸದಾ ಸನ್ನದ್ಧವಾಗಿರಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚನೆ, ವಿಪತ್ತು ನಿರ್ವಹಣೆ ಕಲ್ಪಿತ ಪ್ರದರ್ಶನ

f451d8b3-663e-42f1-be55-cbee6cf31d95
Published on

ಬೆಂಗಳೂರು ಗ್ರಾಮಾಂತರ: ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತು ಸಂಭವಿಸಿದಾಗ ಉಂಟಾಗುವ ಹಾನಿ, ಸಾವು-ನೋವು ತಡೆಯಲು ಸಂಬಂಧಿಸಿದ ಎಲ್ಲ ಇಲಾಖೆಗಳು ಸದಾ ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ರಾಸಾಯನಿಕ ವಿಪತ್ತು ನಿವಾರಣಾ ದಿನಾಚರಣೆ ಅಂಗವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೈಗಾರಿಕಾ ಸುರಕ್ಷ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಹಾಗೂ ತೈಲ ಮಾರುಕಟ್ಟೆ ಕಂಪನಿಗಳ ಸಹಯೋಗದೊಂದಿಗೆ ಹೊಸಕೋಟೆಯ ಐಒಸಿಎಲ್‌ನ ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಸಂಗ್ರಹಣಾ ಘಟಕದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣೆ ಕುರಿತ ಕಲ್ಪಿತ ಪ್ರದರ್ಶನದಲ್ಲಿ ಮಾತನಾಡಿದರು.

ರಾಸಾಯನಿಕ ಅನಿಲ ಸೋರಿಕೆ, ಅಗ್ನಿ ಅವಘಡದಂತಹ ತುರ್ತು ಪರಿಸ್ಥಿತಿ ಎದುರಾದಾಗ ಎನ್‌ಡಿಆರ್‌ಎಫ್, ಅಗ್ನಿಶಾಮಕ, ಆರೋಗ್ಯಇಲಾಖೆ, ಪೊಲೀಸ್ ಸೇರಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಂಡವಾಗಿ ಕಾರ್ಯ ನಿರ್ವಹಿಸುವುದರಿಂದ ವಿಪತ್ತನ್ನು ಸುಲಭವಾಗಿ ನಿರ್ವಹಿಸಬಹುದು ಎಂದರು.

ಕಟ್ಟಡಗಳಲ್ಲಿ ಸದೃಢ ಮತ್ತು ಸುರಕ್ಷಿತ ಕಾರ್ಯಾಚರಣೆ, ಅಪಾಯಗಳ ನಿಯಂತ್ರಣ ಮತ್ತು ತುರ್ತು ನಿರ್ವಹಣೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಅಪಾಯಕಾರಿ ರಾಸಾಯನಿಕ ವಸ್ತುಗಳನ್ನು ತಯಾರಿಸುವ, ಶೇಖರಿಸುವ ಉಪಯೋಗಿಸುವ ಮತ್ತು ಸಾಗಣೆ ಮಾಡುವ ಉದ್ದಿಮೆ ಮತ್ತು ಕೈಗಾರಿಕೆಗಳಿಗೆ ಸುರಕ್ಷತೆ ಕುರಿತು ನಿಖರ ತಿಳಿವಳಿಕೆ ಮೂಡಿಸಬೇಕು ಎಂದು ಹೇಳಿದರು.

ತರಬೇತಿ ಮುಖ್ಯ: ದುರಂತದಿಂದ ಸಂಭವಿಸುವ ನೋವು ಮತ್ತು ನಷ್ಟಗಳನ್ನು ಕನಿಷ್ಠಗೊಳಿಸುವ ಹಾಗೂ ಪರಿಣಾಮಕಾರಿಯಾಗಿ ತುರ್ತು ಸ್ಥಿತಿ ನಿಭಾಯಿಸುವ ಕುರಿತು ಕೆಲಸಗಾರರನ್ನು ಸಿದ್ಧಗೊಳಿಸಬೇಕು. ಆಡಳಿತ ವರ್ಗದವರಿಗೆ ವಿಪತ್ತುಗಳ ನಿವಾರಣೆಯಲ್ಲಿ ಜವಾಬ್ದಾರಿ ಹಾಗೂ ಸಂಬಂಧಿಸಿದ ಇಲಾಖೆಯವರಿಗೆ ತರಬೇತಿ ನೀಡುವುದು ಬಹಳ ಮುಖ್ಯವಾಗಿದೆ ಎಂದು ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಜಂಟಿ ನಿರ್ದೇಶಕ ನವನೀತ್ ಮೋಹನ್ ಹೇಳಿದರು.

ಅರಿವು ಮೂಡಿಸುವ ಉದ್ದೇಶ: ಅಪಾಯಕಾರಿ ಕೈಗಾರಿಕೆಗಳ ಸುತ್ತುಮುತ್ತಲಿನ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ ಕಾರ್ಖಾನೆಯಿಂದ ಉಂಟಾಗಬಹುದಾದ ಅಪಾಯ ಮತ್ತು ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಈ ಕಲ್ಪಿತ ಪ್ರದರ್ಶನದ ಮುಖ್ಯ ಉದ್ದೇಶ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ತಿಳಿಸಿದರು.

ಕಲ್ಪಿತ ಪ್ರದರ್ಶನ ರೂಪು: ದೇವನಗೊಂಥಿ ಐಒಸಿಎಲ್‌ನ ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಸಂಗ್ರಹಣಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಕಾರ್ಖಾನೆ ಸಿಬ್ಬಂದಿ ನಿಯಂತ್ರಿಸಲಾಗದೆ, ಜಿಲ್ಲಾಡಳಿತದ ಮೊರೆ ಹೋದಾಗ, ಜಿಲ್ಲಾಧಿಕಾರಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ತುರ್ತು ಪರಿಸ್ಥಿತಿ ಘೋಷಿಸಿದರು. ನಂತರ ದೇವಲಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೆರೆಯಲಾದ ಕಂಟ್ರೋಲ್ ರೂಂ ಮೂಲಕ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಂಪರ್ಕ ಸಾಧಿಸಿ, ಅವಘಡ ನಡೆದ ಸ್ಥಳಕ್ಕೆ ಧಾವಿಸಿದ ಕಲ್ಪಿತ ಪ್ರದರ್ಶನದೊಂದಿಗೆ ಸ್ಥಳೀಯರಿಗೆ ಅರಿವು ಮೂಡಿಸಲಾಯಿತು. ಬಳಿಕ ಸುಟ್ಟ ಗಾಯಾಳುಗಳನ್ನು ರಕ್ಷಿಸಿ, ಆಂಬುಲೆನ್ಸ್ ಮೂಲಕ ಆರೋಗ್ಯ ಕೇಂದ್ರಗಳಿಗೆ ಸಾಗಿಸಿ, ಸಕಾಲಕ್ಕೆ ಚಿಕಿತ್ಸೆ ಒದಗಿಸಲಾಯಿತಲ್ಲದೆ, ಅವಘಡ ಸಂಭವಿಸಿದ ಸ್ಥಳದ ಸುತ್ತಮುತ್ತಲ ಗ್ರಾಮಗಳ ಜನ ಹಾಗೂ ಜಾನುವಾರಗಳನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ತುರ್ತು ಪರಿಸ್ಥಿತಿ ಹಿಂಪಡೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net