

ಧಾರವಾಡ: ನಗರದ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ 13 ನಿರ್ದೇಶಕ ಸೇರಿ ಒಟ್ಟು 15 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆ ತುರá-ಸಿನಿಂದ ಕೂಡಿತ್ತು.
ಈ ಬಾರಿಗೆ ಮಂಡಳ ನಾಲ್ಕು ಬಣಗಳಾಗಿದ್ದು, ಬರೋಬ್ಬರಿ 60 ಜನರು ಕಣದಲ್ಲಿದ್ದರು. ಮರಾಠಾ ಮಂಡಳ ಆವರಣದಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 4ರವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, 2 ಕೌಂಟರ್ಗಳಲ್ಲಿ ಮಾತ್ರ ಮತದಾನದ ವ್ಯವಸ್ಥೆ ಮಾಡಿದ್ದರಿಂದ ಮತದಾನ ವಿಳಂಬವಾದ ಕಾರಣ ಸಂಜೆ 5.30ರವರೆಗೂ ಅವಕಾಶ ನೀಡಲಾಯಿತು.
ರಾತ್ರಿ ಒಂದು ಗಂಟೆಯಾದರೂ ಎಣಿಕೆ ಕಾರ್ಯ ನಡೆದಿತ್ತು. ಬೆಳಗ್ಗೆಯಿಂದ ಸುಗಮವಾಗಿ ಚುನಾವಣೆ ನಡೆದಿದ್ದು, ಮಧ್ಯಾಹ್ನ 2 ಗುಂಪುಗಳ ಕಾರ್ಯಕರ್ತರ ಮಧ್ಯೆ ಸಣ್ಣ ಗಲಾಟೆ ನಡೆದಿದ್ದರಿಂದ ಕೆಲಹೊತ್ತು ಗೊಂದಲದ ವಾತಾವರಣ ನಿರ್ವಣವಾಗಿತ್ತು. ಚುನಾವಣೆಗೆ ಸ್ಪರ್ಧಿಸಿದ್ದ ವ್ಯಕ್ತಿಯೊಬ್ಬರನ್ನು ಮತದಾನ ಕೇಂದ್ರದೊಳಗೆ ಬಿಟ್ಟಿದ್ದೇ ಗಲಾಟೆಗೆ ಕಾರಣವಾಯಿತು. ಅಭ್ಯರ್ಥಿಯನ್ನು ಒಳಗೆ ಬಿಟ್ಟಿದ್ದನ್ನು ಇನ್ನೊಂದು ಬಣದ ಕಾರ್ಯಕರ್ತರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಎರಡೂ ಗುಂಪುಗಳ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.