ತುಮಕೂರು ಜಿಲ್ಲೆಯಿಂದ ದೆಹಲಿಗೆ ಹೋಗಿದ್ದ 11 ಮಂದಿಗೆ ಸೋಂಕಿಲ್ಲ!

Jamath new
Published on

ತುಮಕೂರು: ಕರೊನಾ ಸೋಂಕಿಗೆ ಬಲಿಯಾದ ಶಿರಾ ಮೂಲದ 65 ವರ್ಷದ ವೃದ್ಧನ ಜತೆಗೆ ದೆಹಲಿಗೆ ಪಯಣ ಬೆಳೆಸಿದ್ದ 13 ಜನರ ತಂಡದಲ್ಲಿದ್ದ ಜಿಲ್ಲೆಯ 11 ಮಂದಿಯಲ್ಲಿ ಕರೊನಾ ಸೋಂಕಿಲ್ಲದೇ ಇರುವುದು ಸಮಾಧಾನಕರ ಅಂಶ.

ದೆಹಲಿಯ ಜಾಮಿಯಾ ಮಸೀದಿಯಲ್ಲಿ ಧಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ಶಿರಾ ಮೂಲದ ವೃದ್ಧನಿಗೆ ಕರೊನಾ ಸೋಂಕು ಅಲ್ಲಿಯೇ ತಗುಲಿರುವ ಸಾಧ್ಯತೆ ಬಗ್ಗೆ ತುಮಕೂರು ಜಿಲ್ಲಾಡಳಿತ ಮಾ.27ರಂದೇ ದೆಹಲಿ ಸರ್ಕಾರವನ್ನು ಎಚ್ಚರಿಸಿತ್ತು. ಈಗ ಇಡೀ ದೇಶವ್ಯಾಪಿ ಕರೊನಾ ಸೋಂಕಿತರು ಹರಡಿದ್ದು ಇದು 3ನೇ ಹಂತಕ್ಕೆ ವ್ಯಾಪಿಸುವ ಆತಂಕ ಎಲ್ಲೆಡೆ ಹಬ್ಬಿದೆ.

11 ಮಂದಿ ತುಮಕೂರಿಗರು!: ಮಾ.5ರಂದು ದೆಹಲಿಗೆ ತೆರಳಿದ್ದ 13 ಜನರ ತಂಡವು ಮಾ.7ಕ್ಕೆ ನಿಜಾಮುದ್ದೀನ ರೈಲ್ವೆ ನಿಲ್ದಾಣದಲ್ಲಿ ಇಳಿದಿತ್ತು. ನಂತರ ಅಲ್ಲಿಂದ ನೇರವಾಗಿ ಜಾಮೀಯಾ ಮಸೀದಿಗೆ ತೆರಳಿ 4 ದಿನ ಮಸೀದಿಯಲ್ಲೇ ತಂಗಿತ್ತು. ಮಾ.11ಕ್ಕೆ ದೆಹಲಿಯಿಂದ ಹೊರಟು 14 ರಂದು ಬೆಂಗಳೂರಿಗೆ ಬಂದಿಳಿದಿತ್ತು. 13 ಜನರ ತಂಡದಲ್ಲಿ 10 ಮಂದಿ ತುಮಕೂರಿಗರು. ತಿಪಟೂರು ಮೂಲದ ಓರ್ವ ಹಾಗೂ ನಾಗಮಂಗಲ ಮೂಲದ ಓರ್ವ ವ್ಯಕ್ತಿ ಸಹ ಇದ್ದರು. ಈ ಸಂದರ್ಭದಲ್ಲೇ ಶಿರಾ ಮೂಲದ ವ್ಯಕ್ತಿಗೆ ಸೋಂಕು ತಗುಲಿರುವ ಸಾಧ್ಯತೆ ನಿಚ್ಚಳವಾಗಿದೆ. ಮೃತ ವೃದ್ಧನ ಜತೆ ದೆಹಲಿ ಪಯಣ ಮುಗಿಸಿ ಒಟ್ಟಿಗೆ ತುಮಕೂರಿಗೆ ಮರಳಿದ್ದ 12 ಮಂದಿಯನ್ನು ಜಿಲ್ಲಾಡಳಿತ ಪತ್ತೆಹಚ್ಚಿ ಅವರನ್ನೆಲ್ಲಾ ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿಟ್ಟಿತ್ತು. ಅಷ್ಟು ಜನರ ರಕ್ತ ಹಾಗೂ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಎಲ್ಲ ವರದಿಗಳು ನೆಗೆಟಿವ್ ಎಂದ ನಂತರವಷ್ಟೇ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿತ್ತು. ಆದರೆ, ಮೃತವೃದ್ಧನ 13 ವರ್ಷದ ಮಗನಿಗೆ ಕರೊನಾ ಸೋಂಕು ತಗುಲಿದ್ದು ಮತ್ತಷ್ಟು ಆತಂಕವನ್ನು ಹುಟ್ಟುಹಾಕಿದೆ. ಹಾಗಾಗಿ, ದೆಹಲಿಗೆ ತೆರಳಿದ್ದವರನ್ನು 28 ದಿನ ಕ್ವಾರಂಟೈನ್‌ನಲ್ಲಿರಿಸಿ ತೀವ್ರ ನಿಗಾವಹಿಸಲಾಗಿದೆ. ಅವರ ಕುಟುಂಬದವರ ಮೇಲೂ ನಿಗಾವಹಿಸಲಾಗಿದೆ.

ಈಗ ಎಲ್ಲೆಲ್ಲೂ ದೆಹಲಿಗೆ ತೆರಳಿದ್ದವರದ್ದೇ ಸದ್ದು !: ಜಿಲ್ಲೆಯಿಂದ ದೆಹಲಿಯಲ್ಲಿ ಮಾ.8 ರಿಂದ 20ರವರೆಗೆ ನಡೆದ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದವರು ಹಾಗೂ ಇವರ ಸಂಪರ್ಕದಲ್ಲಿ ಇದ್ದವರು ವೈಯಕ್ತಿಕವಾಗಿ ವಿಳಂಬ ಮಾಡದೆ ತುರ್ತಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ಬಗ್ಗೆ ಮಾಹಿತಿ ಇದ್ದಲ್ಲಿ ತುರ್ತಾಗಿ ಕಂಟ್ರೋಲ್ ರೂಂ ದೂ.ವಾ.ಸಂ.0816-2257368, 0816-2252025 ಹಾಗೂ 0816-2278386ಕ್ಕೆ ಸಂಪರ್ಕಿಸಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮನವಿ ಮಾಡಿದ್ದರು.

ಜಿಲ್ಲೆಯಲ್ಲಿ ಕರೊನಾ ಅಂಕಿಅಂಶ (ಏಪ್ರಿಲ್ 1ಕ್ಕೆ): ಒಟ್ಟು ಗಮನಕ್ಕಿರುವವರು-480, ಹೋಮ್ ಕ್ವಾರಂಟೈನ್-325, ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರುವವರು-82, 28ದಿನ ಮನೆಯಲ್ಲಿದ್ದವರು- 45, ಪರೀಕ್ಷೆಗೆ ಒಳಗಾದವರು- 120, ನೆಗೆಟಿವ್ ವರದಿ- 115, ಪಾಸಿಟಿವ್- 02, ವರದಿ ಬರಬೇಕಿರುವುದು-00, ಸಾವು-01, ಸ್ಯಾಂಪಲ್ ರಿಜಿಕ್ಟೆಡ್-03.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net