

ತುಮಕೂರು : ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ಜನ ದೇವರ ದರ್ಶನ ಪಡೆದರು.
ಬೆಳಗ್ಗೆಯಿಂದಲೇ ವಿಶೇಷ ಅಲಂಕಾರ, ವೈಕುಂಠ ಮಹಾದ್ವಾರ ಪ್ರವೇಶ ಹಾಗೂ ಪುಣ್ಯದರ್ಶನ ವ್ಯವಸ್ಥೆ ಮಾಡಲಾಗಿತ್ತು. ನಗರದ ರಿಂಗ್ ರಸ್ತೆಯ ಕೆಎಚ್‌ಬಿ ಕಾಲನಿಯಲ್ಲಿರುವ ತಿರುಮಲ ನಗರದಲ್ಲಿನ ತಿರುಮಲ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಮುಂಜಾನೆ 4ಕ್ಕೆ ಶ್ರೀಸ್ವಾಮಿಗೆ ಪಂಚಾಮೃತ ಅಭಿಷೇಕ, 5ಕ್ಕೆ ಪ್ರ್ರಾಕಾರೋತ್ಸವ, ಉಯ್ಯಾಲೆ ಸೇವೆ, ಮಹಾಮಂಗಳಾರತಿ ನೆರವೇರಿತು.
ಬಟವಾಡಿ ಮಹಾಲಕ್ಷ್ಮೀ ಬಡಾವಣೆ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರೀವೆಂಕಟೇಶ್ವರ ವೈಕುಂಠ ವೈಭವ ಏರ್ಪಡಿಸಲಾಗಿತ್ತು. ಶ್ರೀಸ್ವಾಮಿಗೆ ವಜ್ರ ಕಿರೀಟ ಹಾಗೂ ವಜ್ರ ಶಂಖ ಚಕ್ರ ವಿಶೇಷ ಅಲಂಕಾರ ಮಾಡಲಾಗಿತ್ತು.
ಮುಂಜಾನೆ 3ಕ್ಕೆ ಸುಪ್ರಭಾತ, ನಿತ್ಯವಿಧಿ, ವಿಶೇಷ ಮಹಾಭಿಷೇಕ, 5.30ಕ್ಕೆ ರಾಜಬೀದಿಯಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು. 6 ಗಂಟೆಗೆ ವೈಕುಂಠ ದ್ವಾರದ ಪೂಜೆ ನೆರವೇರಿಸಿ ಭಕ್ತರಿಗೆ ಶ್ರೀಸ್ವಾಮಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಗರದ ಬಿ.ಎಚ್.ರಸ್ತೆಯಲ್ಲಿರುವ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ಸ್ವಾಮಿಯ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದೇವರಾಜ ಅರಸು ರಸ್ತೆಯ ಸರಸ್ವತಿಪುರಂನಲ್ಲಿರುವ ನವಗ್ರಹ ಶ್ರೀ ವೆಂಕೇಟಶ್ವರಸ್ವಾಮಿ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯದೊಂದಿಗೆ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ಜಯನಗರದ ಪದ್ಮವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲೂ ಸಹ ಶ್ರದ್ಧಾ ಭಕ್ತಿಯಿಂದ ವೈಕುಂಠ ಏಕಾದಶಿಯ ಪೂಜಾ ಕೈಂಕರ್ಯ ನಡೆದವು.
ನಗರದ ಹೊರವಲಯದ ಮಧುಗಿರಿ ರಸ್ತೆಯಲ್ಲಿರುವ ವೆಂಕಟೇಶಪುರದ ಶ್ರೀವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಶ್ರೀಸ್ವಾಮಿಗೆ ವೈಕುಂಠ ಪರವಾಸುದೇವ ವಿಶೇಷ ಅಲಂಕಾರ ಮಾಡಲಾಗಿತ್ತು. ಜತೆಗೆ ಭಕ್ತರಿಗೆ ವೈಕುಂಠ ಮಹಾದ್ವಾರ ಪ್ರವೇಶ ಮತ್ತು ಪುಣ್ಯದರ್ಶನಕ್ಕೆ ವ್ಯವಸ್ಥೆ ವಾಡಿಕೊಡಲಾಗಿತ್ತು. ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಿಶೇಷ ಪೂಜಾ ವಿಧಿ ವಿಧಾನಗಳು ನೆರವೇರಿದವು.