ತುಮಕೂರು ಜಿಲ್ಲೆಯಲ್ಲಿ ಭರ್ಜರಿ ಮಳೆ ; ಭಾನುವಾರ ದಿನಪೂರ್ತಿ ಮೋಡ ಕವಿದ ವಾತಾವರಣ

DSC_1828
Published on

ತುಮಕೂರು: ರಾಜ್ಯದ ಬಹುಭಾಗವನ್ನು ಸಂಕಷ್ಟದಲ್ಲಿ ಮುಳುಗಿಸಿರುವ ಮಳೆರಾಯ, ಜಿಲ್ಲೆಯಲ್ಲಿಯೂ ಭರ್ಜರಿಯಾಗಿಯೇ ಸುರಿಯಲಾರಂಭಿಸಿದ್ದಾನೆ. ಭಾನುವಾರ ಜಿಲ್ಲೆಯ ಅರ್ಧ ಭಾಗದಲ್ಲಿ ಮಳೆ ಸುರಿಯಿತು.

ಹೇಮಾವತಿಯಿಂದ ಜಿಲ್ಲೆಗೆ ನೀರು ಹರಿಸಲಾಗಿರುವ ನಡುವೆಯೇ ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ತುಮಕೂರು ತಾಲೂಕಿನಲ್ಲಿ ದಿನವಿಡೀ ಜಿಟಿಜಿಟಿ ಮಳೆ ಸುರಿಯಿತು. ಕೆಲವು ಕಡೆ ದೊಡ್ಡ ಹನಿಯ ಮಳೆಯೂ ಬಂದಿದೆ. ದಿನಪೂರ್ತಿ ಮೋಡ ಕವಿದ ವಾತಾವರಣವಿದ್ದು, ಎಲ್ಲೆಡೆಯೂ ಒಳ್ಳೆಯ ಮಳೆಯಾಗಿದ್ದು ಈ ವರ್ಷದ ಕೃಷಿ ಚಟುವಟಿಕೆ ಹಾಗೂ ಅಂತರ್ಜಲ ಅಭಿವೃದ್ಧಿಯ ಬಗ್ಗೆ ರೈತರಿಗೆ ಖುಷಿಯಾಗಿದೆ. ಮಳೆ ಇನ್ನೂ ಒಂದೆರಡು ದಿನ ಮುಂದುವರಿಯಲಿದ್ದು ಕೆರೆಗಳಿಗೆ ಜೀವಬರುವ ವಿಶ್ವಾಸ ಮೂಡಿದೆ.

ತುಮಕೂರು ನಗರದಲ್ಲಿ ದಿನವಿಡೀ ಜಿಟಿಜಿಟಿ ಮಳೆ ಸುರಿಯುತ್ತಲೇ ಇತ್ತು, ಭಾನುವಾರ ಸಂಜೆಯ ನಂತರ ಜೋರಾಗಿಯೇ ಮಳೆ ಸುರಿದಿದ್ದು ರಸ್ತೆಗಳೆಲ್ಲ ತುಂಬಿ ಹರಿದವು, ವಾಹನ ಸವಾರರು ಪರದಾಡಿದರು. ಕುಣಿಗಲ್ ರಸ್ತೆ ಹಾಗೂ ಶೆಟ್ಟಿಹಳ್ಳಿ ಗೇಟ್ ಕೆಳಸೇತುವೆಯಲ್ಲಿ ಆಳುದ್ದದ ನೀರು ತುಂಬಿತ್ತು, ಕೋತಿತೋಪು, ಬಿ.ಎಚ್.ರಸ್ತೆ, ಅಶೋಕರಸ್ತೆಯ ತಗ್ಗು ಪ್ರದೇಶದಲ್ಲಿ ಕೆರೆಯಂತೆ ನೀರು ನಿಂತಿದ್ದು ವಾಹನಗಳು ಸಂಚಾರಕ್ಕೆ ಅಡ್ಡಿಯಾಗಿತ್ತು. ನಗರದ ಬಹುತೇಕ ರಸ್ತೆಗಳಲ್ಲಿ ಸಾಕಷ್ಟು ದಿನದಿಂದ ತೇಪೆ ಹಚ್ಚುವ ಕಾರ್ಯ ನಡೆದಿದ್ದು ಬಡಾವಣೆಗಳ ರಸ್ತೆಗಳಲ್ಲಿಯೂ ಜಿಟಿಜಿಟಿ ಮಳೆ ನಡೆದಾಡಲು ಅಡ್ಡಿಪಡಿಸಿತು.

ಜನಜೀವನ ಅಸ್ತವ್ಯಸ್ತ(ತುರುವೇಕೆರೆ): ತಾಲೂಕಿನಾದ್ಯಂತ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು, ಭಾನುವಾರ ಸಂಜೆಯೂ ಕೆಲವು ಭಾಗದಲ್ಲಿ ಬಾರಿ ಮಳೆ ಸುರಿದಿದೆ. ಇತ್ತೀಚೆಗೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಜನರು ತತ್ತರಿಸುವಂತಾಗಿದೆ. ಹಗಲಿನಲ್ಲಿ ಜಡಿ ಮಳೆ ಸುರಿಯುತ್ತಿರುವುದರಿಂದ ಪಟ್ಟಣದ ರಸ್ತೆಯಲ್ಲಿ ಜನರ ಸಂಚಾರ ವಿರಳವಾಗಿತ್ತು. ರೈತರು ಕೃಷಿ ಚಟುವಟಿಕೆಗಳಿಗೆ ತೊಡಕಾಗಿದ್ದರೇ, ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲು ಕಷ್ಟ ಪಡುವಂತಾಗಿದೆ. ತಾಲೂಕಿನ ಹಲವೆಡೆ ಬಿಡಿ ಮಳೆ ಬಿದ್ದರೆ, ಸಂಪಿಗೆಯಲ್ಲಿ ಉತ್ತಮ ಮಳೆ ಸುರಿದಿದೆ. ಭಾನುವಾರ ಸಂಜೆ 4 ಗಂಟೆಗೆ ಪ್ರಾರಂಭವಾದ ಮಳೆ 6 ಗಂಟೆವರೆಗೂ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶದ ಜನರಿಗೆ ತೊಂದರೆಯಾಗಿತ್ತು. ಈ ವರ್ಷದಲ್ಲಿ ಉತ್ತಮ ಮಳೆಯಾಗಿದ್ದು ತೆಂಗು, ಅಡಿಕೆ ತೋಟಗಳಿಗೆ ಉತ್ತಮವಾಗಿದೆ ಎಂದು ಗ್ರಾಮಸ್ಥ ಶಿವಲಿಂಗಮೂರ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net