

ತುಮಕೂರು: ಜಿಲ್ಲೆಯಲ್ಲಿ ಶುದ್ಧ ನೀರಿಲ್ಲದೆ ಕುರಿ ಹಾಗೂ ಮೇಕೆಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಕೃಷಿ ಜತೆಗೆ ರಾಜ್ಯದಲ್ಲಿಯೇ ಅತೀ ಹೆಚ್ಚು ಕುರಿ, ಮೇಕೆ ಸಾಕಾಣಿಕೆ ಮಾಡುತ್ತಿರುವ ಜಿಲ್ಲೆಯಲ್ಲಿ ಪ್ರಸ್ತುತ ಜಾನುವಾರು ಗಣತಿಯಂತೆ 1067330 ಕುರಿಗಳು ಹಾಗೂ 326890 ಮೇಕೆಗಳು ಇವೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಗಮನ ಸೆಳೆಯಲು ಪತ್ರ ಬರೆದಿರುವ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ಕೆ.ನಾಗಣ್ಣ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕುರಿ ಹಾಗೂ ಮೇಕೆಗಳಿಗಾಗಿಯೇ ನೀರಿನ ತೊಟ್ಟಿ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿರುವ ಶೇ.65 ರೈತರು ಕುರಿ, ಮೇಕೆಗಳನ್ನು ಸಾಕಿ ಬದುಕು ರೂಪಿಸಿಕೊಂಡಿದ್ದಾರೆ, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಎದುರಾಗಿದ್ದು, ಕೊಳಕು ನೀರು ಕುಡಿದು ಕುರಿ, ಮೇಕೆಗಳು ಸಾವನ್ನಪ್ಪುತ್ತಿರುವ ಬಗ್ಗೆ ನಿಗಮ ಜಿಪಂ ಸಿಇಒ ಶುಭಾಕಲ್ಯಾಣ್ ಗಮನಕ್ಕೆ ತಂದಿದೆ. ಜಿಪಂ, ತಾಪಂ ಅಧಿಕಾರಿಗಳು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಲಹೆ ಸ್ವೀಕರಿಸಬೇಕಿದೆ. ಜಿಲ್ಲೆಯ ಪಿಡಿಒಗಳಿಗೆ ಸೂಚನೆ ನೀಡಿ ಅಗತ್ಯವಿರುವ ಕಡೆಗಳಲ್ಲಿ ನೀರಿನ ತೊಟ್ಟಿ ನಿರ್ಮಿಸಿಕೊಡುವ ತುರ್ತು ಅಗತ್ಯವಿದೆ.
ವಿಶೇಷ ತೊಟ್ಟಿಗಳೇ ಬೇಕು!: ಕುರಿ, ಮೇಕೆಗಳಿಗೆ ನೀರು ಕುಡಿಯಲು ವಿಶೇಷವಾದ ತೊಟ್ಟಿಗಳೇ ಬೇಕಿದೆ, 2 ಅಡಿಯ ತೊಟ್ಟಿಗಳಾದರೆ ನೀರು ಕುಡಿಯಲು ಸಾಧ್ಯವಾಗುವುದಿಲ್ಲ. ನೆಲಮಟ್ಟದಲ್ಲಿ ನೀರು ಕುಡಿಯಲು ಸಹಾಯಕವಾಗುವಂತೆ ವಿಶೇಷ ತೊಟ್ಟಿಗಳನ್ನು ನಿರ್ಮಿಸಬೇಕಿದೆ. ಮನರೇಗಾ ಯೋಜನೆಯಲ್ಲಿ ಇಂತಹ ಕಾಮಗಾರಿಗಳಿಗಾಗಿಯೇ ಸಾಕಷ್ಟು ಅನುದಾನ ಲಭ್ಯವಿದ್ದು ಬಳಸಿಕೊಳ್ಳುವ ದೊಡ್ಡಗುಣ ಜಿಪಂ ಅಧಿಕಾರಿಗಳಿಗೆ ಬರಬೇಕಷ್ಟೇ.
ನಿರ್ಮಾಣವಾಗಲಿ ನೀರಿನ ತೊಟ್ಟಿಗಳು: ಕುರಿ, ಮೇಕೆಗಳ ಎತ್ತರಕ್ಕೆ ಅನುಗುಣವಾಗಿ ಸಿಮೆಂಟ್‌ನಿಂದ ತಯಾರಿಸಿದ ಅರ್ಧ ಅಡಿ ಎತ್ತರದ ರಿಂಗ್‌ಗಳನ್ನು ಬಳಸಿಕೊಂಡು ನಿರ್ಮಿಸಬಹುದಾದ ತೊಟ್ಟಿಗೆ ಕನಿಷ್ಠ 5 ಸಾವಿರ ರೂ. ಸಾಕಿದ್ದು, ಗ್ರಾಪಂ ಪಿಡಿಒಗಳು ಪ್ರತಿಗ್ರಾಮದಲ್ಲಿಯೂ ಅಗತ್ಯವಿರುವ ಕಡೆ ಇಂತಹ ತೊಟ್ಟಿ ನಿರ್ಮಿಸಬೇಕಿದೆ.
ಬೇಸಿಗೆಯಲ್ಲಿ ಕೆರೆ-ಕಟ್ಟೆಗಳಲ್ಲಿ ಸಿಗುವ ಕೊಳಕು ನೀರು ಕುಡಿಯುವ ಕುರಿ, ಮೇಕೆಗಳು ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದು ರೈತರಿಗೆ ನಷ್ಟವಾಗುತ್ತಿದೆ. ನೀರಿನ ತೊಟ್ಟಿ ನಿರ್ಮಿಸಿ ಶುದ್ಧ ನೀರಿನ ವ್ಯವಸ್ಥೆ ಮಾಡುವಂತೆ ಎಲ್ಲ ತಾಪಂ ಇಒಗಳಿಗೆ ಮನವಿ ಮಾಡಲಾಗಿದೆ. ಡಾ.ಕೆ.ನಾಗಣ್ಣ ಸಹಾಯಕ ನಿರ್ದೇಶಕ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ತುಮಕೂರು