ತುಮಕೂರು ಜಿಲ್ಲೆಯಲ್ಲಿ ಎರಡನೇ ಕರೊನಾ ಪ್ರಕರಣ ಪತ್ತೆ

DSC_6244
Published on

ತುಮಕೂರು: ಜಿಲ್ಲೆಯಲ್ಲಿ 2ನೇ ಕರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಸೋಂಕಿನಿಂದ ಮೃತಪಟ್ಟ ವೃದ್ಧನ 13 ವರ್ಷದ ಮಗನಿಗೆ ಸೋಂಕು ದೃಢಪಟ್ಟಿದೆ.

ಕಳೆದ ಶುಕ್ರವಾರ ಸೋಂಕಿಗೆ ಬಲಿಯಾಗಿದ್ದ ಶಿರಾ ಮೂಲದ 65 ವರ್ಷದ ವೃದ್ಧನ ಮಗನಿಗೆ ಸೋಂಕು ತಗುಲಿದ್ದು, ಆತನಿಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಗೆ ರವಾನಿಸಲಾಯಿತು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಮೃತ ವೃದ್ಧನ ಜತೆ ಕುಟುಂಬದ 20 ಮಂದಿ ಸೇರಿ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಟ್ಟು 33 ಮಂದಿಯನ್ನು ಗುರುತಿಸಲಾಗಿತ್ತು. ಅದರಲ್ಲಿ ವೃದ್ಧನ 13 ವರ್ಷದ ಮಗನಿಗೆ ಸೋಂಕು ಇರುವುದು ದೃಢಪಟ್ಟಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ ಇನ್ನುಳಿದ ಎಲ್ಲರ ಪ್ರಯೋಗಾಲಯ ವರದಿ ನೆಗೆಟಿವ್ ಬಂದಿದೆ. ವೃದ್ಧನ ಜತೆಗೆ ದೆಹಲಿಯ ಜಾಮಿಯಾ ಮಸೀದಿಗೆ ತೆರಳಿದ್ದ 12ರ ಪೈಕಿ ತಿಪಟೂರಿನ ಒಬ್ಬ ಹಾಗೂ ತುಮಕೂರಿನ 10 ಮಂದಿ ಶಂಕಿತರ‌್ಯಾರಿಗೂ ಸೋಂಕು ತಗುಲಿಲ್ಲ ಎಂದು ತಿಳಿಸಿದರು.

ಮಾ.17ಕ್ಕೆ ತಿಪಟೂರಿಗೆ ಭೇಟಿ: ಮಾ.17ರಂದು ತಿಪಟೂರಿಗೆ ತೆರಳಿದ್ದ ಮೃತ ವೃದ್ಧ ಅಲ್ಲಿ ಕೆಲವರನ್ನು ಭೇಟಿಯಾಗಿದ್ದು ಅವರನ್ನೂ ಸಹ ಪ್ರಾಥಮಿಕ ಸಂಪರ್ಕದಲ್ಲಿದ್ದವರೆಂದು ಪರಿಗಣಿಸಿ 11 ಜನರನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ. ಎಲ್ಲರ ರಕ್ತ ಹಾಗೂ ಗಂಟಲು ಸ್ರಾವ ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನೂ 30 ಜನರ ಪ್ರಯೋಗಾಲಯ ವರದಿಯ ನಿರೀಕ್ಷೆಯಲ್ಲಿದ್ದೇವೆ ಎಂದು ರಾಕೇಶ್ ಕುಮಾರ್ ಮಾಹಿತಿ ನೀಡಿದರು.

ಶಿರಾ ನಗರ ಸಂಪೂರ್ಣ ಲಾಕ್‌ಡೌನ್: ಶಿರಾ ನಗರದಲ್ಲೇ 2ನೇ ಕರೊನಾ ಸೋಂಕು ಪ್ರಕರಣ ಪತ್ತೆ ಆಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಟ್ಟುನಿಟ್ಟಾಗಿ ಇಡೀ ನಗರವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದೆ. ಒಟ್ಟಾರೆ ಶಿರಾ ನಗರಕ್ಕೆ ಪ್ರವೇಶ ಹಾಗೂ ಹೊರ ಹೋಗುವುದನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಸಾರ್ವಜನಿಕರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಮನೆ-ಮನೆಗೆ ತಲುಪಿಸುವ ವ್ಯವಸ್ಥೆಯನ್ನು ತಾಲೂಕು ಆಡಳಿತ ಮಾಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

100ಕ್ಕೂ ಹೆಚ್ಚು ತಂಡ: ಶಿರಾ ನಗರದಲ್ಲಿ 100ಕ್ಕಿಂತ ಹೆಚ್ಚು ತಂಡಗಳನ್ನು ಮಾಡಿ ಪ್ರತೀ ಮನೆಗೆ ಭೇಟಿ ನೀಡಿ ಜ್ವರ, ನೆಗಡಿ ಇನ್ನಿತರ ಯಾವುದೇ ಸಮಸ್ಯೆಗಳು ಇವೆಯೇ ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ. ಮೃತವೃದ್ಧನ ಕುಟುಂಬದ ಸದಸ್ಯರಲ್ಲಿ ಕರೊನಾ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.

ಸೋಂಕಿತ ಬುದ್ಧಿಮಾಂದ್ಯ : ಕರೊನಾ ಸೋಂಕಿಗೆ ಬಲಿಯಾದ ಮೃತವೃದ್ಧನ 13 ವರ್ಷದ ಮಗನಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಸೋಂಕಿತ ಬಾಲಕ ಬುದ್ಧಿಮಾಂದ್ಯನಾಗಿದ್ದು, ಆತ ಮನೆ ಬಳಿ ಇರುವ ಅಂಗಡಿಗೆ ಹೋಗಿ ಬಂದಿರುವುದು ಬಿಟ್ಟರೆ ಬೇರೆ ಯಾವ ಹುಡುಗರೊಂದಿಗೆ ಸಂಪರ್ಕ ಹೊಂದಿಲ್ಲ. ಮಾತು ಕೂಡ ಅಸ್ಪಷ್ಟವಾಗಿದ್ದು ಮನೆಯಲ್ಲಿ ಇದ್ದದ್ದರಿಂದ ಮತ್ತು ರೋಗನಿರೋಧಕ ಶಕ್ತಿ ಇಲ್ಲದಿರುವುದರಿಂದ ಸೋಂಕು ತಗುಲಿದೆ ಎನ್ನಲಾಗಿದೆ. ಪ್ರಯೋಗಾಲಯ ವರದಿ ಬಂದಿದ್ದು ಕುಟುಂಬದ ಎಲ್ಲ ಸದಸ್ಯರ ರಿಪೋರ್ಟ್ ನೆಗೆಟಿವ್ ಇದೆ. ಇನ್ನೂ 28 ದಿನಗಳ ಕಾಲ ಕುಟುಂಬದ ಸದಸ್ಯರನ್ನೆಲ್ಲಾ ಎಂಸಿಎಚ್ ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿಡಲಾಗಿದೆ.

ಸೋಂಕಿತರಿಗಾಗಿ ಹಾಸ್ಟೆಲ್ ಪರಿಶೀಲನೆ (ಶಿರಾ): ಕರೊನಾಗೆ ಬಲಿಯಾದ ವೃದ್ಧನ ಮಗನಿಗೂ ಸೋಂಕು ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ಘೋಷಿಸಿದ್ದಾರೆ. ಇದಕ್ಕೂ ಮುನ್ನ ಸೋಂಕಿತರ ಐಸೋಲೇಷನ್ ವಾರ್ಡ್‌ಗಾಗಿ ತಾಲೂಕು ಆಡಳಿತ ಸರ್ಕಾರಿ ಹಾಸ್ಟೆಲ್‌ಗಳ ಪರಿಶೀಲನೆ ನಡೆಸಿದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆಯೇ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ಭಾನುವಾರ ವಿವಿಧ ಅಧಿಕಾರಿಗಳ ತಂಡ ಸಪ್ತಗಿರಿ ಬಡಾವಣೆಯಲ್ಲಿನ ವಿವಿಧ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೋಂಕಿತರನ್ನು ವಿದ್ಯಾರ್ಥಿನಿಲಯಗಳಿಗೆ ಸ್ಥಳಾಂತರಿಸಲಾಗುತ್ತದೆ ಎನ್ನುವ ಸುದ್ದಿಯಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದು, ಅಧಿಕಾರಿಗಳ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಮೃತ ಸೋಂಕಿತನ ಕುಟುಂಬದವರು, ಹತ್ತಿರದ ಸಂಬಂಧಿಗಳು ಸೇರಿ 16 ಜನರನ್ನು ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ಇಡಲಾಗಿದೆ.

ಸಹಾಯವಾಣಿ ಆರಂಭ: ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ಉಪವಿಭಾಗದ ತುಮಕೂರು, ಗುಬ್ಬಿ ಹಾಗೂ ಕುಣಿಗಲ್ ತಾಲೂಕಿನ ಜನರಿಗೆ ಅಗತ್ಯ ಸೇವೆ ದೊರಕಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಹಾಯವಾಣಿ ಸೌಲಭ್ಯ ಕಲ್ಪಿಸಲಾಗಿದೆ. ಅಗತ್ಯ ಸೇವೆಗಳನ್ನು ಒದಗಿಸಲು ಆಯಾ ತಾಲೂಕಿಗೆ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಸೇವೆಯ ಅಗತ್ಯವಿರುವವರು ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು ಎಂದು ಉಪವಿಭಾಗಾಧಿಕಾರಿ ಅಜಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಮಕೂರು ಉಪವಿಭಾಗ ವ್ಯಾಪ್ತಿಯ ಕೂಲಿ ಕಾರ್ಮಿಕರು, ಭಿಕ್ಷುಕರು ಹಾಗೂ ಅಲೆಮಾರಿಗಳಿಗೆ ಊಟ, ವಸತಿ ದೊರೆಯದಿದ್ದಲ್ಲಿ, ದೈನಂದಿನ ಸಾಮಗ್ರಿಗಳು, ಆಹಾರ ಪದಾರ್ಥಗಳು, ವೈದ್ಯಕೀಯ ವಸ್ತುಗಳು ದೊರಕದಿದ್ದರೆ ಅಥವಾ ದರ ಹೆಚ್ಚಳವಾದಲ್ಲಿ; ವಿದೇಶದಿಂದ/ಬೆಂಗಳೂರು ಮತ್ತಿತರ ಪ್ರದೇಶಗಳಿಂದ ಬಂದು ಗ್ರಾಮ/ ನಗರಗಳಲ್ಲಿ ಹೋಂ ಕ್ವಾರೆಂಟೈನ್‌ನಲ್ಲಿರುವ ವ್ಯಕ್ತಿಗಳು ರಸ್ತೆ/ ಮನೆಯ ಹೊರಗಡೆ ತಿರುಗಾಡಿದರೆ ದೂರು ದಾಖಲು ಮಾಡಲು ಮೊಬೈಲ್(ಸಹಾಯವಾಣಿ)ಗೆ ಕರೆ ಮಾಡಿ ಮಾಹಿತಿ ನೀಡಬಹುದು. ತುಮಕೂರು ಜಿಲ್ಲೆಯ ಕೋವಿಡ್-19 ರೋಗಕ್ಕೆ ಸಂಬಂಧಿಸಿದಂತೆ ಸಹಾಯವಾಣಿ : 0816-2278387 ಮತ್ತು 1077, ಅಗತ್ಯ ಸೇವೆಗೆ 0816-2252371, 2252372. ಚಿಕ್ಕನಾಯಕನಹಳ್ಳಿ ಸಾರ್ವಜನಿಕರ ಅನುಕೂಲಕ್ಕಾಗಿ 08133267242 ಸಂಪರ್ಕಿಸಿ ಎಂದು ತಹಸೀಲ್ದಾರ್ ತೇಜಸ್ವಿನಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net