

ತುಮಕೂರು: ಜಿಲ್ಲೆಯಲ್ಲಿ ಮತ್ತೆ ಕರೊನಾ ತನ್ನ ಅಟ್ಟಹಾಸ ಮೆರೆದಿದೆ. ವರಮಹಾಲಕ್ಷ್ಮೀ ಹಬ್ಬದ ದಿನವಾದ ಶುಕ್ರವಾರ 101 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1718ಕ್ಕೇರಿದೆ. ಮತ್ತಿಬ್ಬರನ್ನು ಕರೊನಾ ಬಲಿಪಡೆದಿದೆ.
ತುಮಕೂರು ತಾಲೂಕಿನಲ್ಲಿ ಅತೀ ಹೆಚ್ಚು 40 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇದೊಂದೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 745ಕ್ಕೇರಿಕೆಯಾಗಿದೆ. ಇನ್ನೂ ತಿಪಟೂರು ತಾಲೂಕಿನಲ್ಲಿ ಒಂದೇ ದಿನ 21 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಪಾವಗಡ-8, ಗುಬ್ಬಿ-7, ಕೊರಟಗೆರೆ-7, ಚಿಕ್ಕನಾಯಕನಹಳ್ಳಿ -6, ಕುಣಿಗಲ್-6, ತುರುವೇಕೆರೆ ಹಾಗೂ ಮಧುಗಿರಿಯಲ್ಲಿ ತಲಾ ನಾಲ್ವರಿಗೆ ಸೋಂಕು ತಗುಲಿದೆ. ಶಿರಾದಲ್ಲಿ ಶುಕ್ರವಾರ ಯಾವುದೇ ಪ್ರಕರಣ ವರದಿಯಾಗಿಲ್ಲ. ತುಮಕೂರಿನ 52 ವರ್ಷದ ವ್ಯಕ್ತಿ ಹಾಗೂ ಮಧುಗಿರಿ ತಾಲೂಕಿನ ಕೊಡಗದಾಲದ 75 ವರ್ಷದ ವೃದ್ಧೆ ಕರೊನಾಕ್ಕೆ ಬಲಿಯಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 54 ಮಂದಿ ಸಾವನ್ನಪ್ಪಿದ್ದು ಆತಂಕಕ್ಕೆ ಕಾರಣವಾಗಿದೆ.
80 ಮಂದಿ ಗುಣಮುಖ: ಜಿಲ್ಲೆಯಲ್ಲಿ ವರಮಹಾಲಕ್ಷ್ಮೀ ಹಬ್ಬದಂದು 80 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈವರೆಗೆ 831 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ. ಒಟ್ಟು 833 ಸಕ್ರಿಯ ಪ್ರಕರಣಗಳಿವೆ. 8 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಬ್ಬಕ್ಕೆ ಗುಣಮುಖರಾದರು!: ವರಮಹಾಲಕ್ಷ್ಮಿ ಹಬ್ಬದಂದೇ 80 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ತುಮಕೂರಿನ 40 ಮಂದಿ, ಕೊರಟಗೆರೆ, ಪಾವಗಡ ತಲಾ 8 ಮಂದಿ, ಚಿಕ್ಕನಾಯಕನಹಳ್ಳಿ 7, ತಿಪಟೂರು 6, ಕುಣಿಗಲ್ 5, ಗುಬ್ಬಿ 3, ಮಧುಗಿರಿ 2 ಹಾಗೂ ತುರುವೇಕೆರೆಯ ಓರ್ವರು ಗುಣಮುಖರಾಗಿದ್ದಾರೆ.
ಒಂದೇ ದಿನ ಇಬ್ಬರು ಬಲಿ: ತುಮಕೂರಿನ ಗಂಗೋತ್ರಿ ನಗರದ 52 ವರ್ಷದ ವ್ಯಕ್ತಿ ಜ್ವರ, ನ್ಯುಮೋನಿಯಾ, ತೀವ್ರ ಉಸಿರಾಟ ತೊಂದರೆ, ಮಧುಮೇಹದಿಂದ ಬಳಲುತ್ತಿದ್ದು, ಜುಲೈ 18 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಜು.29ರಂದು ಸಾವನ್ನಪ್ಪಿದ್ದು ಶುಕ್ರವಾರ ಸೋಂಕು ತಗುಲಿರುವ ವರದಿ ಸಿಕ್ಕಿದೆ. ಮಧುಗಿರಿ ತಾಲೂಕಿನ ಕೊಡಗದಾಲದ 75 ವರ್ಷದ ವೃದ್ಧೆ ಕೆಮ್ಮು, ಜ್ವರ, ಉಸಿರಾಟತೊಂದರೆಯಿಂದ ಬಳಲುತ್ತಿದ್ದು ಜು.29ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು. ಶುಕ್ರವಾರ ನಿಧನ ಹೊಂದಿದ್ದು ಸೋಂಕು ಇರುವುದು ದೃಢಪಟ್ಟಿದೆ.
ಐವರು ಗರ್ಭಿಣಿಯರಿಗೆ ಸೋಂಕು: ಐವರು ಗರ್ಭಿಣಿಯರಿಗೆ ಸೋಂಕು ತಗುಲಿದೆ. ತುಮಕೂರಿನ ಮೂವರು ಹಾಗೂ ಕೊರಟಗೆರೆ ಇಬ್ಬರು ಗರ್ಭಿಣಿಯರಿಗೆ ಸೋಂಕು ದೃಢಪಟ್ಟಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 5ವರ್ಷದೊಳಗಿನ 4 ಮಕ್ಕಳಿಗೂ ಸೋಂಕು ತಗುಲಿದೆ. 60 ವರ್ಷ ಮೇಲ್ಪಟ್ಟ 13 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ರೋಗ ಲಕ್ಷಣ ಕಂಡ ಕೂಡಲೇ ಪರೀಕ್ಷಿಸಿ : ಕರೊನಾ ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಜ್ವರ ಕ್ಲಿನಿಕ್‌ಗೆ ಭೇಟಿ ನೀಡಿ ಕೋವಿಡ್-19 ಪರೀಕ್ಷೆಗೆ ಒಳಗಾಗಬೇಕು ಎಂದು ತುಮಕೂರು ಉಪವಿಭಾಗಾಧಿಕಾರಿ ಅಜಯ್ ಮನವಿ ಮಾಡಿದ್ದಾರೆ. ಕೆಮ್ಮು, ಸೀನು, ಜ್ವರ, ತಲೆನೋವು, ವಾಂತಿ ಬೇಧಿ, ಮೈ ಕೈ ನೋವು ಹಾಗೂ ಇತರ ಲಕ್ಷಣಗಳು ಕಂಡು ಬಂದರೆ ತಕ್ಷಣ ಪರೀಕ್ಷೆಗೆ ಒಳಗಾಗಿ ಹಾಗೂ ರೋಗ ದೃಢಪಟ್ಟರೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕಿಟ್ ಸರಬರಾಜು ಮಾಡಲಾಗಿದ್ದು, ಪರೀಕ್ಷೆ ನಡೆದು ಕೇವಲ 15 ನಿಮಿಷಗಳಲ್ಲಿ ಕರೊನಾ ಫಲಿತಾಂಶ ದೊರೆಯಲಿದೆ. ತುಮಕೂರು ಉಪವಿಭಾಗದ ತುಮಕೂರು, ಕುಣಿಗಲ್ ಮತ್ತು ಗುಬ್ಬಿ ತಾಲೂಕುಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಬಹಳಷ್ಟು ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮಾಹಿತಿಗೆ ಸಮನ್ವಯಾಧಿಕಾರಿಗಳಾದ ತುಮಕೂರು ಡಾ.ಶರತ್‌ಚಂದ್ರ ಮೊ.9880105993, ಡಾ.ಕೇಶವರಾಜ್ 9449843210, ಕುಣಿಗಲ್ ಡಾ.ಜಗದೀಶ್ 9591414700, ಡಾ.ಚೇತನ್ 8971884715, ಗುಬ್ಬಿ ಡಾ.ಬಿಂದುಮಾಧವನ್ 8277507011, ಡಾ.ರಜನಿ 9448613666 ಸಂಪರ್ಕಿಸಿ ಎಂದು ವಿವರಿಸಿದ್ದಾರೆ.