

ತುಮಕೂರು: ಜಿಲ್ಲೆಯಲ್ಲಿ ಕರೊನಾ ಮತ್ತೆ ಶತಕ ದಾಖಲಿಸಿದ್ದು, ಭಾನುವಾರ ಬರೋಬ್ಬರಿ 135 ಜನರಿಗೆ ಸೋಂಕು ದೃಢಪಟ್ಟಿದೆ. 3 ಜನರು ಸಾವನ್ನಪ್ಪಿರುವುದು ಭಯ ಮೂಡಿಸಿದೆ.
ಸೋಂಕಿತರ ಒಟ್ಟು ಸಂಖ್ಯೆ 1916 ತಲುಪಿದ್ದು, ಇನ್ನೂ 8 ಜನರು ತೀರ್ವ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ, ಪ್ರಸ್ತುತ 888 ಸಕ್ರಿಯ ಪ್ರಕರಣಗಳಿದ್ದು, ಬಹುತೇಕರ ಆರೋಗ್ಯ ಸ್ಥಿರವಾಗಿದೆ.
ಭಾನುವಾರ 54 ಜನರು ಸೇರಿ ಒಟ್ಟು 971 ಜನರು ಕರೊನಾ ವಿರುದ್ಧ ಹೋರಾಡಿ ಗುಣಮುಖರಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಬಹುತೇಕರಿಗೆ ರೋಗದ ಲಕ್ಷಣಗಳಿಲ್ಲ ಎಂಬುದು ತುಸು ಸಮಾಧಾನ ಮೂಡಿಸಿದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವ 4044 ಜನರ ಮೇಲೆ ನಿಗಾವಹಿಸಲಾಗಿದ್ದು, ಈವರೆಗೆ 37026ಜನರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ, ಸೋಂಕಿನ ಕಾರಣಕ್ಕೆ 57 ಜನರು ಸಾವನ್ನಪ್ಪಿರುವುದು ಜನರ ಆತಂಕ ಹೆಚ್ಚಿಸಿದೆ. ತುಮಕೂರು ತಾಲೂಕಿನಲ್ಲಿ ಅತೀ ಹೆಚ್ಚು 36 ಜನರಲ್ಲಿ ಸೋಂಕು ಕಾಣಿಸಿದ್ದರೆ ಶಿರಾ 24, ತಿಪಟೂರು ನಗರದಲ್ಲಿ 21 ಜನರಲ್ಲಿ ಕರೊನಾ ಕಾಣಸಿಕೊಂಡು ಭವಿಷ್ಯದ ದಿನಗಳಲ್ಲಿ ಸೋಂಕು ಹೆಚ್ಚಾಗುವ ಆತಂಕ ಮೂಡಿಸಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 17, ಕುಣಿಗಲ್ 13, ತುರುವೇಕೆರೆ ಹಾಗೂ ಪಾವಗಡ 7, ಮಧುಗಿರಿ 6, ಕೊರಟಗೆರೆ 3 ಮತ್ತು ಗುಬ್ಬಿಯಲ್ಲಿ ಒಬ್ಬರಿಗೆ ಸೋಂಕು ದೃಢವಾಗಿದೆ. ಕುಣಿಗಲ್, ಶಿರಾ ತಲಾ ಒಬ್ಬರು ಹಾಗೂ ತಿಪಟೂರಿನಲ್ಲಿ ಇಬ್ಬರು ಗರ್ಭಿಣಿಯರಿಗೆ ಸೋಂಕು ತಗುಲಿದೆ, ತಿಪಟೂರಿನಲ್ಲಿ ಒಬ್ಬರು ಪೊಲೀಸ್ ಸಿಬ್ಬಂದಿ, 5 ವರ್ಷದೊಳಗಿನ ಇಬ್ಬರು ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ 19 ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ. ಭಾನುವಾರ ಸೋಂಕು ಪತ್ತೆಯಾದವರಲ್ಲಿ 84 ಪುರುಷರು, 51 ಮಹಿಳೆಯರು ಸೇರಿದ್ದಾರೆ. ಭಾನುವಾರ ಚಿಕ್ಕವಯಸ್ಸಿನ ಇಬ್ಬರು ಮೃತಪಟ್ಟಿರುವುದು ಗಮನಾರ್ಹ.
31 ವರ್ಷದ ಮಹಿಳೆ ಸೇರಿ ಮೂವರ ಸಾವು: ತುಮಕೂರು ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಗುರಿಯಾಗಿದ್ದ ಮೂವರು ಭಾನುವಾರ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 57ಕ್ಕೇರಿದೆ. ಜ್ವರ, ಶೀತ, ಕಫ ಹಾಗೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತಿದ್ದ ತುಮಕೂರಿನ ಸದಾಶಿವನಗರ ಬಡಾವಣೆಯ 31 ವರ್ಷದ ಮಹಿಳೆ, ಶಿರಾ ತಾಲೂಕಿನ 36 ವರ್ಷದ ಮಲ್ಲೇಕೆರೆಹಳ್ಳಿಯ ಪುರುಷ ಹಾಗೂ ಬಾರ್‌ಲೈನ್ ರಸ್ತೆಯ 60 ವರ್ಷದ ವೃದ್ಧ ಬಲಿಯಾಗಿದ್ದಾರೆ, ಕಡಿಮೆ ವಯಸ್ಸಿನವರೂ ಕರೊನಾಗೆ ಬಲಿಯಾಗುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಸಂಪರ್ಕಿಸಲು ಮನವಿ : ಮಧುಮೇಹ, ಅಧಿಕ ರಕ್ತದೊತ್ತಡ, ಜ್ವರ, ಕೆಮ್ಮು, ಶೀತ ಸೇರಿ ಇತರ ರೋಗ ಲಕ್ಷಣಗಳು ಇದ್ದಲ್ಲಿ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಜಿಲ್ಲಾಡಳಿತ ಮನವಿ ಮಾಡಿದೆ. ಮಾಹಿತಿಗೆ ದೂ.0816 2278387, 2251414, 2257368, 2252025, 2278386 ಅಥವಾ 104 ಸಹಾಯವಾಣಿ ಸಂಪರ್ಕಿಸಬಹುದು.