ತುಮಕೂರಿನಲ್ಲೇ 69 ಮಂದಿಗೆ ಕರೊನಾ ಸೋಂಕು ; ಇಬ್ಬರು ಸಾವು

10.pnh-1
Published on

ತುಮಕೂರು: ಜಿಲ್ಲೆಯಲ್ಲಿ ಶುಕ್ರವಾರ ಕರೊನಾ ಸ್ಫೋಟವಾಗಿದ್ದು, ಒಂದೇ ದಿನ 95 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಬ್ಬರು ಸಾವನ್ನಪ್ಪಿರುವುದು ಆತಂಕ ಹೆಚ್ಚಿಸಿದೆ. ಇದುವರೆಗೆ 428 ಕೇಸ್ ದಾಖಲಾಗಿದೆ.

ತುಮಕೂರು ನಗರದಲ್ಲಿಯೇ 69 ಪ್ರಕರಣ ದಾಖಲಾಗಿವೆ. 15 ದಿನ ಬೆಂಗಳೂರಿನಲ್ಲಿ ಕರ್ತವ್ಯನಿರ್ವಹಿಸಿದ್ದ ಕೆಎಸ್‌ಆರ್‌ಪಿ ತುಕಡಿಯ 29 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ರಕ್ಷಣೆ ನೀಡುತ್ತಿರುವ ಪೊಲೀಸ್ ವಲಯವನ್ನೇ ಬೆಚ್ಚಿ ಬೀಳಿಸುವಂತಾಗಿದೆ.

ಕರ್ತವ್ಯ ನಿರ್ವಹಿಸಿದ್ದ ಇವರನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು. ಈ ಸಮಯದಲ್ಲಿ ಕುಟುಂಬದ ಸದಸ್ಯರ ಜತೆ ಸಂಪರ್ಕ ಇಲ್ಲದಿರುವುದು ಸಮಾಧಾನ ತಂದಿದೆ. ಈ ಹಿಂದೆ ಪಾಸಿಟಿವ್ ಬಂದ ಸೋಂಕಿತರ ಜತೆ ಸಂಪರ್ಕದಲ್ಲಿದ್ದ 4 ಪೊಲೀಸ್ ಸಿಬ್ಬಂದಿಗೂ ಸೋಂಕು ದೃಢವಾಗಿದೆ. ಕಳ್ಳಂಬೆಳ್ಳ 2, ಕುಣಿಗಲ್ 1 ಹಾಗೂ ತುಮಕೂರು ನಗರ ಠಾಣೆಯ ಒಬ್ಬ ಸಿಬ್ಬಂದಿಗೆ ಸೋಂಕು ದೃಢವಾಗಿದೆ.

ಜಿಲ್ಲೆಯಲ್ಲಿ ಒಟ್ಟು ಐವರು ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದಂತಾಗಿದೆ. ತುಮಕೂರು ನಗರದಲ್ಲಿ ಈವರೆಗೆ 153 ಜನರಿಗೆ ಸೋಂಕು ತಗುಲಿದ್ದು, ಶುಕ್ರವಾರ ಅತ್ಯಧಿಕ ಸಂಖ್ಯೆಯಲ್ಲಿ ವರದಿಯಾಗಿದೆ. ಮಹಾನಗರ ಪಾಲಿಕೆ ವತಿಯಿಂದ ಸೋಂಕಿತರ ಸಂಪರ್ಕದಲ್ಲಿದ್ದವರ ಪತ್ತೆ ಕಾರ್ಯ ಸರಿಯಾಗಿ ನಡೆಯದ ಕಾರಣಕ್ಕೆ ಸೋಂಕು ಮಿತಿಮೀರುತ್ತಿದೆ ಎಂಬ ದೂರು ಕೇಳಿಬಂದಿದೆ.

ಶುಕ್ರವಾರ ಮಧ್ಯಾಹ್ನವರೆಗೆ ಆರೋಗ್ಯ ಇಲಾಖೆ ಪೋರ್ಟಲ್‌ನಲ್ಲಿ ದಾಖಲಾಗಿದ್ದ ಅಂಕಿ-ಅಂಶಗಳನ್ನು ಪ್ರಕಟಿಸಲಾಗಿದ್ದು ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆಯಿದೆ. ಪಟ್ಟನಾಯಕನಹಳ್ಳಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ 4 ಮಕ್ಕಳು, ಶಿರಾ ನಗರದಲ್ಲಿ ಕ್ವಾರಂಟೈನ್‌ನಲ್ಲಿದ್ದ 4, ಆರೋಗ್ಯ ಕಾರ್ಯಕರ್ತೆ, ಕಳ್ಳಂಬೆಳ್ಳ ಠಾಣೆ ಸಿಬ್ಬಂದಿ ಸೇರಿ ತಾಲೂಕಿನಲ್ಲಿ ಒಟ್ಟು 17 ಜನರಿಗೆ ಸೋಂಕು ದೃಢವಾಗಿದೆ.

ಜಿಪಂ ಕಚೇರಿಗೂ ಸೋಂಕು!: ತುಮಕೂರು ಜಿಪಂ ಕಚೇರಿಯ ನೆಲಮಹಡಿಯಲ್ಲಿ ಕೆಲಸ ಮಾಡುವ ಪುರುಷ ಸಿಬ್ಬಂದಿ ಒಬ್ಬರಿಗೆ ಸೋಂಕು ದೃಢವಾಗಿದ್ದು, ಆತಂಕ ಮನೆಮಾಡಿದೆ. ಕಚೇರಿಯಲ್ಲಿ ಸಾಕಷ್ಟು ಸಭೆಗಳು ನಡೆಯುತ್ತಿದ್ದು ಭಾಗವಹಿಸಿದ್ದವರಿಗೆಲ್ಲ ತಳಮಳ ಶುರುವಾಗಿದೆ. ಶನಿವಾರ, ಭಾನುವಾರ ಕಚೇರಿಗೆ ರಜೆ ಇದ್ದು ಸಂಪೂರ್ಣ ಸ್ಯಾನಿಟೈಸ್ ಮಾಡಲು ಸೂಚಿಸಲಾಗಿದೆ.

ಕರೊನಾಕ್ಕೆ ಇಬ್ಬರ ಬಲಿ: ಜಿಲ್ಲೆಯಲ್ಲಿ ಕರೊನಾಕ್ಕೆ ಮತ್ತಿಬ್ಬರು ಬಲಿಯಾಗಿದ್ದಾರೆ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ತುಮಕೂರಿನ ಸದಾಶಿವನಗರದ 55 ವರ್ಷದ ವ್ಯಕ್ತಿ ಗುರುವಾರ ಮೃತಪಟ್ಟಿದ್ದಾರೆ. ಪಿಎಚ್ ಕಾಲನಿ ನಿವಾಸಿ 65 ವರ್ಷದ ವೃದ್ಧೆ ಸಹ ತೀವ್ರ ಉಸಿರಾಟ ತೊಂದರೆ, ಮಧುಮೇಹದಿಂದ ಬಳಲುತ್ತಿದ್ದು ಅವರು ಕೂಡ ಗುರುವಾರ ಮೃತಪಟ್ಟಿದ್ದರು. ಇವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಾವಿನ ಸಂಖ್ಯೆ 13ಕ್ಕೇರಿದೆ.

ಐದು ತಾಲೂಕಿನಲ್ಲಿ 95 ಪ್ರಕರಣ: ಶುಕ್ರವಾರ ತುಮಕೂರು 69, ಶಿರಾ 17, ಪಾವಗಡ 4, ಕೊರಟಗೆರೆ 3, ಮಧುಗಿರಿಯ ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಇನ್ನುಳಿದ ಐದು ತಾಲೂಕಿನಲ್ಲಿ ಯಾವುದೇ ಪ್ರಕರಣ ದಾಖಲಾಗದಿರುವುದು ತುಸು ನೆಮ್ಮದಿ ಮೂಡಿಸಿದೆ.

ಕರೊನಾ ಸಂಖ್ಯೆ ನೋಡಿ ಸಾರ್ವಜನಿಕರು ಭಯಪಡುವ ಅವಶ್ಯಕತೆಯಿಲ್ಲ, ರೋಗ ಲಕ್ಷಣ ಕಾಣಿಸಿದರೆ ಕೂಡಲೇ ಆರೋಗ್ಯ ಕೇಂದ್ರಕ್ಕೆ ಬಂದು ತಪಾಸಣೆ ಮಾಡಿಕೊಳ್ಳಬೇಕು, ರೋಗ ಗುಣಪಡಿಸಲು ಸಾಧ್ಯವಿದ್ದು ಎಲ್ಲರೂ ಸಹಕಾರ ನೀಡಬೇಕು. ಡಾ.ನಾಗೇಂದ್ರಪ್ಪ ಡಿಎಚ್‌ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net