ತುಮಕೂರಿನಲ್ಲಿ ಡಿಸೆಂಬರ್‌ಗೆ ವೈಜ್ಞಾನಿಕ ಸಮ್ಮೇಳನ: ಹುಲಿಕಲ್ ನಟರಾಜ್ ಮಾಹಿತಿ

HOS WEB
Published on

ಹೊಸನಗರ: ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನಿಂದ ತುಮಕೂರಿನಲ್ಲಿ ಡಿ.28 ಮತ್ತು 29ರಂದು ರಾಷ್ಟ್ರ ಮತ್ತು ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದರು.

ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಡಾ. ಸುಧಾಮೂರ್ತಿ, ಸಿಎನ್‌ಆರ್ ರಾವ್ ಮತ್ತು ಅಜೀಂ ಪ್ರೇಮ್‌ಜಿ ಹೆಸರಿದೆ. ಈ ಪೈಕಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ವೈಜ್ಞಾನಿಕ ಪರಿಷತ್‌ಗೆ ಮೂರು ವರ್ಷ ತುಂಬುತ್ತಿದೆ. ಈಗಾಗಲೇ 45 ಸಾವಿರ ಸದಸ್ಯರು ನೋಂದಣಿ ಮಾಡಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಮೊದಲ ಸಮ್ಮೇಳನದಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಸಮ್ಮೇಳನಾ ಅಧ್ಯಕ್ಷರಾಗಿದ್ದರು. ಜನರಲ್ಲಿ ವೈಜ್ಞಾನಿಕ ಮನೋಭಾವ ತುಂಬುವುದು, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು, ಪ್ರಯೋಗಾತ್ಮಕವಾಗಿ ಸಮ್ಮೇಳನವನ್ನು ವಿಶಿಷ್ಟವಾಗಿ ಆಯೋಜಿಸಲಾಗುವುದು ಎಂದರು.

ವೈಜ್ಞಾನಿಕ ಸಂಶೋಧನಾ ಪರಿಷತ್ ಕುವೆಂಪು ಹುಟ್ಟಿದ ದಿನ ಸ್ಥಾಪನೆಯಾಯಿತು. ಶಿಡ್ಲಘಟ್ಟದಲ್ಲಿ ಈಗಾಗಲೇ 10 ಎಕರೆ ಭೂಮಿ ಕೂಡ ನೋಂದಣಿಯಾಗಿದೆ. ಕೇಂದ್ರ ಸರ್ಕಾರ 10 ಎಕರೆ ಗ್ರಾಮದಲ್ಲಿ ವಿಜ್ಞಾನ ಗ್ರಾಮ ಮಾಡಲು ಮುಂದಾಗಿದೆ ಎಂದರು.

ಮೂಲ ನಂಬಿಕೆಗಳು ಇರಲಿ, ಆದರೆ ಮೂಢನಂಬಿಕೆಗಳು ಬೇಡ. ಪಂಚಾಂಗಗಳಿಗಿಂತ ಪಂಚ ಅಂಗಗಳ ಕಡೆ ಗಮನಹರಿಸಬೇಕು. ಮನೆಯ ವಾಸ್ತುಗಿಂತ ಮನಸ್ಸಿನ ವಾಸ್ತು ಸುಧಾರಿಸಬೇಕು. ವಿದ್ಯೆ ಮತ್ತು ಬುದ್ಧ್ದಿವಂತ ಮನುಷ್ಯರಿಗಿಂತ ಪ್ರಜ್ಞಾವಂತ ಮನುಷ್ಯರ ನಿರ್ಮಾಣವಾಗಬೇಕು. ಸಮಾಜದ ಸಂಸ್ಕೃತಿ ವಿಕೃತಿ ಕಡೆ ಸಾಗುತ್ತಿದೆ. ಮಾನವೀಯ ಮೌಲ್ಯ ಪ್ರಾಕ್ಟಿಕಲ್ ಆಗಿರಲಿ ಎಂಬುದು ಪರಿಷತ್‌ನ ಉದ್ದೇಶವಾಗಿದ್ದು ಆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಇದಕ್ಕೂ ಮುನ್ನ ಸರ್ ಎಂ.ವಿಶ್ವೇಶ್ವರರಯ್ಯ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಇಂಜಿನಿಯರ್ ದಿನ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net